ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಯ ರಿಯಲ್ ನಾಯಕ ಬೊಮ್ಮನ್ ಹಾಗೂ ನಾಯಕಿ ಬೆಳ್ಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಲಿದ್ದಾರೆ.
ಬೊಮ್ಮನ್ ಹಾಗೂ ಬೆಳ್ಳಿ ಇರುವ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಅಲ್ಲಿಯೇ ಅವರಿಗೆ ಸನ್ಮಾನ ಮಾಡಲಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಈ ದಂಪತಿಗೆ ಮೋದಿ ಶುಭಾಶಯ ಕೋರಿದ್ದು ಇದೀಗ ಖುದ್ದು ಭೇಟಿಯಾಗಿ ಗೌರವ ಸಲ್ಲಿಸುತ್ತಿದ್ದಾರೆ.
ಈ ಬಾರಿ ಆರ್ ಆರ್ ಆರ್ ಹಾಗೂ ‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಅಭಿಮಾನದ ಮಹಾಪೂರವೇ ಹರಿದು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಬಹುತೇಕ ಗಣ್ಯರು ಎರಡೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಿಸಿದ್ದರು.
ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ ಮತ್ತು ಹೀರೋಯಿನ್ ಬೆಳ್ಳಿ ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿ ಇವರ ಬದುಕನ್ನೇ ಕೇಂದ್ರೀಕರಿಸಿ ಮಾಡಿದ್ದು. ಹಾಗಾಗಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಯಿಸಿಕೊಂಡು ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಇದೀಗ ಮೋದಿ ಇಬ್ಬರನ್ನು ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದಾರೆ.