ಮೈಸೂರು: ಮಾದರಿ ಕ್ಷೇತ್ರವಾಗಬೇಕಿದ್ದ ವರುಣಾ ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಯಾವ ಮೂಲಭೂತ ಸೌಕರ್ಯವೂ ಇಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಆರೋಪ ಮಾಡಿದ್ದಾರೆ.
ನಾಡನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ವರುಣ ಕ್ಷೇತ್ರದ ಉಪ್ಪಾರ ಸಮಾಜ, ಗಾಣಿಗ ಸಮಾಜ, ಮಡಿವಾಳ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರುಣಾ ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗ ಬೇಕಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡಿದೆ. ಒಂದು ಒಳ್ಳೆಯ ಆಸ್ಪತ್ರೆ ಇಲ್ಲ, ಕಾಲೇಜು ಇಲ್ಲ. ಈ ಕ್ಷೇತ್ರ ಮೂರು ತಾಲೂಕಿಗೆ ಸೇರಿಕೊಂಡು ಕ್ಷೇತ್ರದ ಜನರು ಎಲ್ಲಾ ಕಡೆ ಅಲೆಯುವಂತಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಿಮ್ಮ ಸಮಾಜಗಳಿಗೆ ಯಾವ ಅಭಿವೃದ್ಧಿ ಆಗಿದೆ ಎಂಬುದನ್ನು ಯಾರಾದರೂ ಹೇಳಿ, ಹೇಳಲಿಕ್ಕೆ ಅಭಿವೃದ್ಧಿಯೇ ಆಗಿಲ್ಲ. ಸಮಾಜದ ಬಂಧುಗಳೇ ನಿಮ್ಮ ಕ್ಷೇತ್ರದ ಸಮರ್ಪಕ ಅಭಿವೃದ್ಧಿಗೆ ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ, ಮೂರು ವರ್ಷದಲ್ಲಿ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನೀವೇ ನೋಡುವಿರಿ. ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನದ ಹೊಳೆಯನ್ನು ಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
”ವರುಣ ಕ್ಷೇತ್ರಕ್ಕೆ ನಾನು ಹೊಸಬನಾಗಿದ್ದೇನೆ. ಆದರೆ ನಾನು ಶಾಸಕನಾಗಿ ಆಯ್ಕೆಯಾಗಿದ್ದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನು ಮಾಡಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಈ ಕ್ಷೇತ್ರವೂ ಕಾರಣವಾಗಿದೆ. ಗೆದ್ದ ನಂತರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ,” ಎಂದರು.