ಮಂಡ್ಯ : ರಾಜ್ಯದ ಜನರ ಹಿತಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಹೀಗಾಗಿ 91ರ ಇಳಿ ವಯಸ್ಸಿನಲ್ಲೂ ಸಹ ನಾನು ನಿಮ್ಮ ಮುಂದೆ ಮತ ಭಿಕ್ಷೆಗೆ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಭಾವುಕ ನುಡಿಗನ್ನಾಡಿದರು.
ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಎಂ.ದೊಡ್ಡಿ, ಕೆ.ಹೊನ್ನಲಗೆರೆ ಹಾಗೂ ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ವೃತ್ತದಲ್ಲಿ ಜೆಡಿಎಸ್ ಅಭ್ಯರ್ಥಿ, ಶಾಸಕ ಡಿ.ಸಿ.ತಮ್ಮಣ್ಣ ಪರ ಶನಿವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದೆ. ತಮ್ಮ ತೆರಿಗೆ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಮಾತ್ರ ಸಾಧ್ಯವಾಗಿದ್ದು, ಈ ಇಳಿ ವಯಸ್ಸಿನಲ್ಲೂ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಉಳಿಸಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ರಾಜ್ಯಾದ್ಯಂತ ಪಂಚರತ್ನ ಯಾತ್ರೆ ನಡೆಸಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದರೆ ರೈತ ಪರ ಸರ್ಕಾರ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ತಮ್ಮಣ್ಣ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ತಮ್ಮಣ್ಣ ತನ್ನದೇ ಆದ ಶಾಶ್ವತ ಕೊಡುಗೆ ನೀಡಿದ್ದಾರೆ. ಕೆಲವು ವಿರೋಧಿಗಳು ಅವರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಜನತೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಕೆ.ಟಿ.ಶ್ರೀಕಂಠೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಯುವ ಘಟಕ ಅಧ್ಯಕ್ಷ ಎಂ.ಐ.ಪ್ರವೀಣ್, ಕಾರ್ಯಾಧ್ಯಕ್ಷ ನಗರಕೆರೆ ಸಂದೀಪ್, ಶಾಸಕ ತಮ್ಮಣ್ಣ ಪುತ್ರಿ ಸೌಮ್ಯ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ