ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ರಾಜೇಂದ್ರ ಪ್ರಸಾದ್ ಮಗಳು ಗಾಯತ್ರಿ (38) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗಾಯತ್ರಿ ನಿಧನಕ್ಕೆ ನಟರಾದ ಚಿರಂಜೀವಿ, ಪವನ್ ಕಲ್ಯಾಣ್, ಜೂನಿಯರ್ ಎನ್ಟಿಆರ್, ನಾನಿ ಸೇರಿದಂತೆ ಹಲವರು ಸಂತಾಪ ಸೂಚಿಸುತ್ತಿದ್ದಾರೆ.
ಗಾಯತ್ರಿ ಅವರಿಗೆ ಮನೆಯಲ್ಲಿ ಇರುವಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಹೈದರಾಬಾದ್ ನ ಗಚ್ಚಿಬೋಲಿನಲ್ಲಿರುವ ಎಐಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗಾಯತ್ರಿ ಅವರು ನಿಧನ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಆದರೆ ಇದೀಗ ಮಗಳು ನಿಧನ ಹೊಂದಿರುವುದು ಅವರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಮೃತ ಗಾಯತ್ರಿ ಅವರಿಗೆ ಓರ್ವ ಮಗನಿದ್ದಾನೆ.
ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಗಳ ಬಗ್ಗೆ ಮಾತನಾಡುವ ವೇಳೆ ರಾಜೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದರು. ಹತ್ತು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ರಾಜೇಂದ್ರ ಪ್ರಸಾದ್ ತಮ್ಮ ತಾಯಿಯನ್ನು ಮಗಳಲ್ಲಿ ಕಾಣುತ್ತಿರುವುದಾಗಿ ಹೇಳಿದ್ದರು.
ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ರಾಜೇಂದ್ರ ಪ್ರಸಾದ್ ಅವರ ನಿವಾಸಕ್ಕೆ ಚಿರಂಜೀವಿ, ಡೈರೆಕ್ಟರ್ ತ್ರಿವಿಕ್ರಮ್, ಅಲ್ಲು ಅರ್ಜುನ್, ವೆಂಕಟೇಶ್, ಸಾಯಿಕುಮಾರ್ ಸೇರಿದಂತೆ ಇತರೆ ಪೋಷಕ ನಟ, ನಟಿಯರು ಭೇಟಿ ನೀಡಿ ಸಮಾಧಾನ ಹೇಳಿದರು.