ಬಾಲಿವುಡ್ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ಫೋಟೋಗಳನ್ನು ತೆಗೆದು ಶೇರ್ ಮಾಡುತ್ತಾರೆ. ಸೆಲೆಬ್ರಿಟಿಗಳು ಯಾವಾಗ ಎಲ್ಲಿ ಹೋಗುತ್ತಾರೆ ಅನ್ನೋದು ಪಾಪರಾಜಿಗಳಿಗೆ ಹೇಗೆ ಗೊತ್ತಾಗುತ್ತೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಟ, ನಟಿಯರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೂ ಅವರ ಮಾರ್ಕೆಟ್ ಹಾಗೆಯೇ ಇರಬೇಕು ಎಂದರೆ ಯಾವಾಗಲು ಪ್ರಚಲಿತದಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು ಎಂದು ಬಯಸುತ್ತಾರೆ. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ನಟ, ನಟಿಯರು ಎಲ್ಲಿ ಹೋಗ್ತಿದ್ದಾರೆ? ಏನುನು ಮಾಡ್ತಿದ್ದಾರೆ ಎನ್ನುವುದನ್ನು ಪಾಪರಾಜಿಗಳಿಗೆ ತಿಳಿಸಿ ಅವರು ಅಲ್ಲಿಗೆ ಬರುವಂತೆ ನೋಡಿಕೊಳ್ಳುವುದು ಸೆಲೆಬ್ರಿಟಿಗಳ ಪಿಆರ್ ತಂಡದವರು. ಈ ವಿಚಾರವನ್ನು ಪ್ರಿಯಾಮಣಿ ತಿಳಿಸಿದ್ದಾರೆ.
‘ಜವಾನ್ ಸಿನಿಮಾ ಬಳಿಕ ಎಲ್ಲರೂ ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಏಕೆ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ಒಬ್ಬರು ಹೇಳಿದರು ಅವರನ್ನು ನೀವು ಕರೆಯಬೇಕು. ಅವರಿಗೆ ಹಣ ನೀಡಬೇಕು. ಈ ವಿಚಾರ ನನಗೆ ಗೊತ್ತಿರಲಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಪಾಪರಾಜಿಗಳನ್ನು ಅವರೇ ಫೋನ್ ಮಾಡಿ ಕರೆಯುತ್ತಾರೆ. ನನಗೆ ಒಂದು ಲಿಸ್ಟ್ ಕೂಡ ಬಂದಿತ್ತು. ಅದರಲ್ಲಿ ಯಾವ ಪಾಪರಾಜಿ ಎಷ್ಟು ಹಣ ಪಡೆಯುತ್ತಾರೆ ಅನ್ನೋದು ಕೂಡ ಇತ್ತು’ ಎಂದಿದ್ದಾರೆ ಪ್ರಿಯಾಮಣಿ.
ಈ ಮೊದಲು ಅನೇಕರು ಈ ಬಗ್ಗೆ ಮಾತನಾಡಿದ್ದರು. ಪಿಆರ್ ತಂಡದವರು ಮೊದಲೇ ಪಾಪರಾಜಿಗಳಿಗೆ ಮಾಹಿತಿ ನೀಡಿ ಅವರನ್ನು ಕರೆಸುತ್ತಾರೆ ಎಂದು ಕೆಲವರು ಹೇಳಿಕೊಂಡಿದ್ದರು. ಈ ರೀತಿ ಪಾಪರಾಜಿಗಳು ಬಂದು ವಿಡಿಯೋ ಹಾಗೂ ಫೋಟೋ ಸೆರೆಹಿಡಿಯಬೇಕಾದರೆ ಅವರಿಗೆ ಮೊದಲೇ ಮಾಹಿತಿ ನೀಡಬೇಕಾಗುತ್ತದೆ ಎಂದು ಅನೇಕರು ಹೇಳಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ.
ಬಹುಭಾಷಾ ನಟಿ ಪ್ರಿಯಾಮಣಿ ಫ್ಯಾಮಿಲಿ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಶಾರುಖ್ ಖಾನ್, ನಯನತಾರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಳಿಕ ಬಾಲಿವುಡ್ನಲ್ಲಿ ಪ್ರಿಯಾಮಣಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ರಿಲೀಸ್ ಆದ ‘ಆರ್ಟಿಕಲ್ 370’ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ.