ಹುಬ್ಬಳ್ಳಿ : ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತ ಚಾಲಕರ ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು. ಆಟೋ ಚಾಲಕರ ಬೇಡಿಕೆಗಳ ಕುರಿತು ಸಿಎಂ ಹಾಗೂ ಸಾರಿಗೆ ಸಚಿವರ ಜೊತೆಗೆ ಚರ್ಚಿಸುವುದಾಗಿ ಸಚಿವ ಲಾಡ್ ಭರವಸೆ ನೀಡಿದರು.
ನಿಮ್ಮ ಸಮಸ್ಯೆಗಳನ್ನ ನೇರವಾಗಿ ಸಿಎಂ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಇಂದು ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಯಾವ ತೀರ್ಮಾನವಾಗುತ್ತೆ ಕಾದು ನೋಡಬೇಕು ಎಂದು ಹೇಳಿದರು. ಆಟೋ ಚಾಲಕರ ಪ್ರತಿಭಟನೆ ಬಗ್ಗೆ ನಾನು ಮನವಿ ಸ್ವೀಕರಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಲಾಡ್ ತಿಳಿಸಿದ್ರು.
ಅಟೋ ಚಾಲಕರ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ನೀಡುವ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಬಡವರ ಹಿಂದುಳಿದ ವರ್ಗಗಳ ಪರವಾಗಿದೆ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು