ರಾಂಚಿ: ಪ್ರೀತಿಗೆ ಜಾತಿ, ಧರ್ಮ, ಭಾಷೆ, ದೇಶ, ಗಡಿಯ ಹಂಗಿಲ್ಲ ಎನ್ನುವುದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಲವ್ ಸ್ಟೋರಿಯೇ ಸಾಕ್ಷಿ. ಪಬ್ಜೀ ಲವರ್ಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿ ಸುದ್ದಿಯಾಗಿದ್ದಾಳೆ.
ಇದರ ಬೆನ್ನಲ್ಲೇ ಇನ್ಸ್ಟಾ ಬಾಯ್ಫ್ರೆಂಡ್ಗಾಗಿ ಪೋಲೆಂಡ್ ಮಹಿಳೆಯೊಬ್ಬಳು ಜಾರ್ಖಂಡ್ಗೆ ಆಗಮಿಸಿ, ಸುದ್ದಿಯಲ್ಲಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಬಾಯ್ಫ್ರೆಂಡ್ಗಾಗಿ ಪೋಲೆಂಡ್ನ 49 ವರ್ಷದ ಮಹಿಳೆಯೊಬ್ಬರು ಜಾರ್ಖಂಡ್ನ ಹಜಾರಿಬಾಗ್ನಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸಲು ಭಾರತಕ್ಕೆ ಆಗಮಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪರಿಚಯ
ಪೊಲೆಂಡ್ನ ಮಹಿಳೆ ಬಾರ್ಬಾರಾ ಪೊಲಾಕ್ ಹಾಗೂ ಜಾರ್ಖಂಡ್ನ ಹಜಾರಿಬಾಗ್ನ ಶಾದಾಬ್ ಮಲಿಕ್ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗುತ್ತಾರೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದೇ, ವಿದೇಶಿ ಮಹಿಳೆ ತನ್ನ ಆರು ವರ್ಷದ ಮಗಳು ಅನನ್ಯಾಳೊಂದಿಗೆ ಭಾರತಕ್ಕೆ ಆಗಮಿಸಿದ್ದು,
ಪ್ರಸ್ತುತ ಪ್ರಿಯಕರ ಶಾದಾಬ್ ಜೊತೆ ಬರತುವಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇಬ್ಬರು ಮೊದಲ ಬಾರಿಗೆ 2021 ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಭೇಟಿಯಾದರು. ಶೀಘ್ರದಲ್ಲೇ ಅವರ ಸ್ನೇಹ ಪ್ರೀತಿಯಾಗಿ ಅರಳಿತು. ಬಾರ್ಬರಾ, ಮಲಿಕ್ ಅವರನ್ನು ಪ್ರೀತಿಸುತ್ತಿದ್ದರು. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದರು. ಅದು 2027 ರವರೆಗೆ ಮಾನ್ಯವಾಗಿರುತ್ತದೆ.
ಮದುವೆಯಾಗಲು ನಿರ್ಧಾರ
ಬಾರ್ಬರಾ ಹಾಗೂ ಮಲಿಕ್ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಬಾರ್ಬರಾ ಅವರ ಮಗಳು ಈಗಾಗಲೇ ಶಾದಾಬ್ ಅನ್ನು “ಅಪ್ಪ” ಎಂದು ಕರೆಯಲು ಪ್ರಾರಂಭಿಸಿದ್ದಾಳೆ.