ಬೆಂಗಳೂರು: ಇನ್ನೂ ಎರಡು, ಮೂರು ದಿನಗಳಲ್ಲಿ ಬಿಜೆಪಿ (BJP) ಸೇರುತ್ತೇನೆ. ಮಂಡ್ಯದಲ್ಲಿ (Mandya) ಇನ್ಮುಂದೆ ಮೂರನೇ ಆಟ ಶುರುವಾಗುತ್ತದೆ ಎಂದು ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ( L.R Shivarame gowda) ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸುವ ಅವಕಾಶ ಇರುವುದು ನನ್ನೊಬ್ಬನಿಗೇ ಮಾತ್ರ. ಕ್ಷೇತ್ರದಲ್ಲಿ ನನಗೆ ನನ್ನದೇ ಆದಂತಹ ಮತಗಳು ಇವೆ. ಮಂಡ್ಯದಲ್ಲಿ 7ಕ್ಕೆ 7 ಸೀಟು ಗೆಲ್ಲಿಸಲು ಪಣ ತೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಬಿಜೆಪಿಯ ಎಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ನನಗೆ ಒಂದು ರಾಷ್ಟ್ರೀಯ ಪಕ್ಷದ ಶಕ್ತಿ ಬೇಕಾಗಿತ್ತು. ಮಂಡ್ಯದಲ್ಲಿ ಬಿಜೆಪಿಯ ಶಕ್ತಿ ಸ್ವಲ್ಪ ಕಡಿಮೆ ಇತ್ತು. ಆದರೆ ರಾಷ್ಟ್ರೀಯ ನಾಯಕರು ಅಲ್ಲಿ ಪಕ್ಷ ಕಟ್ಟುವ ಇಚ್ಛೆ ಪಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಮುಟ್ಟಿ ನೋಡಿಕೊಳ್ಳಬೇಕು ಆ ರೀತಿಯಲ್ಲಿ ಮಂಡ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಮಂಡ್ಯದ ಸ್ವಾಭಿಮಾನ ಅಮಿತ್ ಶಾ ಕಾಲು ಕೆಳಗೆ ಹೋಗಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ಅಮಿತ್ ಶಾ ಜೊತೆ ಹೋದಾಗ ಅವರಿಗೆ ಅವರ ಪಾದ ನೆನಪು ಆಗಲಿಲ್ಲವೇ? ನರೇಂದ್ರ ಮೋದಿಯವರು ದೇವೇಗೌಡರನ್ನು ಅಷ್ಟೊಂದು ಗೌರವಯುತವಾಗಿ ಕಂಡಿದ್ದಾರೆ. ದೇವೇಗೌಡರು ಅಂತವರು ನರೇಂದ್ರ ಮೋದಿ, ಅಮಿತ್ ಶಾ ಮೇಲೆ ಪ್ರೀತಿ ಇಟ್ಕೊಂಡಿದ್ದಾರೆ. ಅಂತಹವರ ಕಾಲು ಕೆಳಗೆ ಬಿದ್ದಿದ್ದಾರೆ ಎಂದು ಯಾಕೆ ಅವರು ಹೇಳುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಕಾಲಿಗೆ ಬಿದ್ದಿದ್ದಾರೆ ಅಂದರೆ ಅದು ಲೆಕ್ಕಕ್ಕೆ ಇಲ್ವಾ? ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವುದೇ ಸಂದರ್ಭದಲ್ಲೂ ಮಂಡ್ಯ ಜನರು ಅವರ ಜೊತೆಗೆ ಇರುತಾರೆ ಎಂಬುದನ್ನು ಅವರು ಬಿಡಬೇಕು. ಈ ಸಾರಿ ಅವರು ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು.
ಚಲುವರಾಯಸ್ವಾಮಿಯನ್ನು ಸೋಲಿಸಲು ನನ್ನನ್ನು ಜೆಡಿಎಸ್ಗೆ ಕರೆದುಕೊಂಡು ಬಂದರು. ಆ ಮೇಲೆ 5 ತಿಂಗಳಿಗೆ ನನ್ನ ಸಂಸದನನ್ನಾಗಿ ಮಾಡಿ ಸಾಲಗಾರನನ್ನಾಗಿ ಮಾಡಿದರು. ಆಮೇಲೆ ಪಾರ್ಟಿಯಲ್ಲಿ ನನ್ನನ್ನು ಏನು ಅಂತಾ ನೋಡಿಲ್ಲ. ಪಾರ್ಟಿಯಿಂದ ಹೊರಗೆ ಹಾಕಿ ಆಮೇಲೆ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕುಮಾರಸ್ವಾಮಿ ವಿರುದ್ಧ ಎಲ್.ಆರ್ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.