ಇನ್ನೆನ್ನೂ ಸದ್ಯದಲ್ಲೇ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳು ಈಗಿನಿಂದಲೇ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಆದರೆ ಚುನಾವಣೆಗೂ ಮುನ್ನವೇ ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ ಗೆಲುವಿನ ಭವಿಷ್ಯ ನುಡಿದಿದ್ದಾರೆ ನಟಿ ಪ್ರೇಮಾ.
ಹಿರೇಕೆರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ನಟಿ ಪ್ರೇಮಾ, ಬಿ.ಸಿ. ಪಾಟೀಲ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪಾಟೀಲರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1998ರಲ್ಲಿ ತೆರೆಕಂಡ ಹಿಟ್ ಸಿನಿಮಾ ‘ಕೌರವ’ ಸಿನಿಮಾದಲ್ಲಿ ಬಿ.ಸಿ ಪಾಟೀಲ್ ಮತ್ತು ಪ್ರೇಮಾ ಒಟ್ಟಾಗಿ ನಟಿಸುವ ಮೂಲಕ ಈ ಜೋಡಿ ಖ್ಯಾತಿ ಘಳಿಸಿತ್ತು. ಕೌರವ ಜೋಡಿ ಎಂದು ಈಗಲೂ ಗುರುತಿಸುವಷ್ಟು ಆ ಸಿನಿಮಾ ನೋಡುಗನ ಮೇಲೆ ಪ್ರಭಾವ ಬೀರಿತ್ತು. ಈ ಬಾಂಧವ್ಯದ ಕಾರಣಕ್ಕಾಗಿ ಪ್ರೇಮಾ ಹಿರೇಕೆರೂರಿಗೆ ಆಗಮಿಸಿ, ಪಾಟೀಲ್ ಪರವಾಗಿ ಮಾತನಾಡಿದ್ದಾರೆ.
‘ಬಿ.ಸಿ.ಪಾಟೀಲರು ಫೋನ್ ಮಾಡಿದ್ದರು. ನಮ್ಮ ತಂದೆ ನಿಧನರಾಗಿದ್ದಾಗ ಅವರು ಬಂದಿದ್ದರು. ಹೀಗಾಗಿ ಅವರ ಮೇಲಿನ ಗೌರವದಿಂದಾಗಿ ನಾನು ಬಂದಿದ್ದೇನೆ. ನನಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ಅವರು ಕರೆದಿದ್ದರು ಅನ್ನುವ ಒಂದೇ ಒಂದು ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ’ ಎಂದರು.
ಇನ್ನೂ ಕೇಸರಿ ಮಹಿಳಾ ಬ್ರಿಗೇಡ್ನ ಮಹಾಸಂಗಮ ಕಾರ್ಯಕ್ರಮವನ್ನು ಹಿರೇಕೆರೂರಿನಲ್ಲಿ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ನಟಿ ಶ್ರುತಿ ಕೂಡ ಆಗಮಿಸಿದ್ದು, ಈ ವೇಳೆ ಬಿಜೆಪಿ ಶಾಲು ಧರಿಸಿ ಬಿಸಿ ಪಾಟೀಲ್ಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಅವರ ಪರವಾಗಿ ಮತಯಾಚನೆಯನ್ನೂ ಮಾಡಿದರು.