ಮಾಸ್ಕೊ: ಗೂಢಚರ್ಯೆ ನಡೆಸಿರುವ ಆಪಾದನೆಯ ಮೇಲೆ ಬಂಧನಕ್ಕೆ ಒಳಗಾಗಿರುವ ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಗಾರ ಇವಾನ್ ಗೆರ್ಸ್ಕೊವಿಚ್ ಅವರನ್ನು ಬಂಧಿಸಿರುವ ಕ್ರಮ ಸರಿಯಾಗಿದೆ ಎಂದು ರಷ್ಯಾ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಷ್ಯಾ ಸೇನೆಯ ಕೈಗಾರಿಕಾ ಸಂಕೀರ್ಣದಲ್ಲಿರುವ ಉದ್ಯಮವೊಂದರ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿಗಳನ್ನು ಗೆರ್ಸ್ಕೊವಿಚ್ ಅಮೆರಿಕದ ನಿರ್ದೇಶನದ ಮೇರೆಗೆ ಕಲೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ಆದರೆ ಇವಾನ್ ಮತ್ತು ಅಮೆರಿಕ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.
ಗೆರ್ಸ್ಕೊವಿಚ್ ಅವರು ಶೀತಲ ಸಮರದ ನಂತರ ಗೂಢಚರ್ಯೆ ಆರೋಪದ ಮೇಲೆ ರಷ್ಯಾದಲ್ಲಿ ಬಂಧನಕ್ಕೆ ಒಳಗಾದ ಅಮೆರಿಕ ಸುದ್ದಿಸಂಸ್ಥೆಯ ಮೊದಲ ವರದಿಗಾರರಾಗಿದ್ದಾರೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ವೇಳೆ ಮಾಸ್ಕೊ ಮತ್ತು ವಾಷಿಂಗ್ಟನ್ ನಡುವೆ ಸಂಬಂಧ ಹದಗೆಟ್ಟಿರುವಾಗ ‘ವಾಲ್ ಸ್ಟ್ರೀಟ್ ಜರ್ನಲ್’ನ ಪ್ರಮುಖ ವರದಿಗಾರನ ಬಂಧನದ ಬೆಳವಣಿಗೆ ನಡೆದಿದೆ.