ನವರಸ ನಾಯಕ ಜಗ್ಗೇಶ್ ನಟನೆಯ, ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್’ ಇತ್ತೀಚೆಗಷ್ಟೇ ತೆರೆ ಖಂಡಿದೆ. ಸಿನಿಮಾ ರಾಜ್ಯದ ಬಹುತೇಕ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ ಪ್ರಚಾರ ಮಾಡುತ್ತಿದ್ದಾರೆ ಎನ್ನವ ಕಾರಣಕ್ಕಾಗಿ ನಿನ್ನೆ ದಾವಣಗೆರೆಯಲ್ಲಿ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿ, ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದರು. ಇದೀಗ ಘಟನೆ ಕುರಿತು ದಾವಣಗೆರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಅಧಿಕಾರಿಯ ಸೂಚನೆಯಂತೆ ಜಗ್ಗೇಶ್ ಇರುವ ಸಿನಿಮಾ ಪೋಸ್ಟರ್ ಗೆ ನಿನ್ನೆ ಬಿಳಿ ಹಾಳೆಯಿಂದ ಮುಚ್ಚಲಾಗಿತ್ತು. ಈ ಕುರಿತು ನಿರ್ಮಾಣ ಸಂಸ್ಥೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿತ್ತು. ಚುನಾವಣೆ ಆಯೋಗವು ಅಡೆತಡೆ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆ ಮಾಡಲಾಗುವುದಿಲ್ಲ ಎಂದಿದ್ದಾರೆ.
ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ನಿನ್ನೆ ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದರು. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು.