ಜ್ಞಾನವಾಪಿ ಮಸೀದಿ(Gyanvapi Mosque)ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಎಎನ್ಐಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಯೋಗಿ, ಅದು ಮಸೀದಿಯೇ ಆಗಿದ್ದರೆ ಅಲ್ಲಿ ತ್ರಿಶೂಲ ಏನು ಮಾಡುತ್ತಿದೆ, ಮುಸ್ಲಿಂ ಸಮುದಾಯವು ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ, ಜ್ಞಾನವಾಪಿ ಮಸೀದಿ ಸಮೀಕ್ಷೆಯ ವಿಚಾರ ಸುಪ್ರೀಂಕೋರ್ಟ್ನಲ್ಲಿದ್ದು, ಸಧ್ಯಕ್ಕೆ ಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಿದೆ, ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಮಹತ್ವ ಪಡೆದಿದೆ.
1991 ರಲ್ಲಿ, ಕಾಶಿ ವಿಶ್ವನಾಥ ದೇವಾಲಯದ ಭಕ್ತರು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ವಿಶ್ವೇಶ್ವರ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಜ್ಞಾನವಾಪಿ ಮಸೀದಿಯ ಸಮೀಪದಲ್ಲಿ ಮೊಕದ್ದಮೆ ಹೂಡಲಾಗಿದೆ.
ಮಸೀದಿಯಲ್ಲಿ ಜೋತಿರ್ಲಿಂಗ, ತ್ರಿಶೂಲಗಳಿವೆ ಇದು ಮಸೀದಿಯಲ್ಲ ಎಂದು ಅಲ್ಲಿನ ಗೋಡೆಗಳೇ ಕೂಗಿ ಹೇಳುತ್ತಿವೆ. ಮುಸ್ಲಿಮರಿಂದ ಐತಿಹಾಸಿಕ ತಪ್ಪಾಗಿದೆ ಅದನ್ನು ಒಪ್ಪಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್ನ ವಿವಾದಿತ ವಝುಖಾನಾ ಭಾಗವನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳ ಎಎಸ್ಐ ಸಮೀಕ್ಷೆಗೆ ಆದೇಶಿಸಿತ್ತು.
ಈ ಆದೇಶದ ವಿರುದ್ಧ ಮಸೀದಿ ಸಮಿತಿ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸರ್ವೆ ನಿಲ್ಲಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್ಗೆ ವರ್ಗಾಯಿಸಿತು. ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಎಎಸ್ಐ ಸಮೀಕ್ಷೆಯ ಕುರಿತು ನಿರ್ಧಾರ ಹೊರಬೀಳಲಿದೆ. ಈ ವಿಚಾರದಲ್ಲಿ ರಾಜಕೀಯ ಬಿಸಿ ಏರಿದೆ. ಜ್ಞಾನವಾಪಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.