ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಮತ್ತು ವಿರಾಟ್ 2027ರಲ್ಲಿ ಆಫ್ರಿಕಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಬುದು ಎಂದು ಭಾರತ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಜುಲೈ ಅಂತ್ಯಕ್ಕೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡು ತಲಾ 3 ಪಂದ್ಯಗಳ ಏಕದಿನ ಕ್ರಿಕೆಟ್ ಮತ್ತು ಟಿ20-ಐ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಈ ಪ್ರವಾಸಕ್ಕೂ ಮುನ್ನ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
36 ವರ್ಷದ ವಿರಾಟ್ ಕೊಹ್ಲಿ ಮತ್ತು 37 ವರ್ಷದ ರೋಹಿತ್ ಶರ್ಮಾ ಈಗಾಗಲೇ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿಯಾಗಿದೆ. ಹೀಗಾಗಿ 39 ಮತ್ತು 40ರ ವಯಸ್ಸಿನಲ್ಲಿ ಮತ್ತೊಂದು ಒಡಿಐ ವಿಶ್ವಕಪ್ ಆಡುವುದು ಅನುಮಾನ ಎಂಬುದು ಕ್ರಿಕೆಟ್ ಪಂಡಿತರ ನುಡಿ. ಆದರೆ, ಈ ಅನುಭವಿಗಳ ಫಿಟ್ನೆಸ್ ಉತ್ತಮವಾಗಿದ್ದರೆ ಖಂಡಿತಾ ಆಡಬಹುದು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.