ವ್ಯಕ್ತಿಯೋರ್ವ ತನ್ನ ವಿಮೆ ಹಣ ಪಡೆಯಲು ತನ್ನ ಎರಡು ಕಾಲುಗಳನ್ನು ಕತ್ತರಿಸಿಕೊಂಡ ಘಟನೆ ಅಮೆರಿಕದ ಮಿಸೌರಿಯಲ್ಲಿ ನಡೆದಿದೆ.
60 ವರ್ಷದ ವ್ಯಕ್ತಿ ಆರೋಗ್ಯ ವಿಮೆ ಹಣವನ್ನು ಪಡೆಯಲು ತನ್ನ ಎರಡು ಕಾಲುಗಳನ್ನು ಕತ್ತರಿಸಿದ್ದಾರೆ. ಇತಿಹಾಸದಲ್ಲೇ ಇದೊಂದು ವಿಚಿತ್ರ ಪ್ರಕರಣ ಎಂದು ಪ್ರಕರಣದ ತನಿಖಾಧಿಕಾರಿ ಹೊವೆಲ್ ಕೌಂಟಿ ಶೆರಿಫ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಈತ ತನ್ನ ಎರಡೂ ಕಾಲುಗಳನ್ನು ಕತ್ತರಿಸಿದ್ದ. ಇದಲ್ಲದೇ ವಿಮೆ ಹಣ ಪಡೆಯಲು ಟ್ರ್ಯಾಕ್ಟರ್ನ ಹಿಂಬದಿಯಲ್ಲಿ ಅಳವಡಿಸಿದ್ದ ಮೊವರ್ನಿಂದ ಕಾಲು ತುಂಡಾಗಿದೆ ಎಂದು ಹೇಳಿದ್ದರು. ಆದರೆ, ಈ ಅಪಘಾತದ ನಂತರ ಅವರ ಕಾಲು ಎಲ್ಲಿಯೂ ಪತ್ತೆಯಾಗಿರಲ್ಲಿಲ್ಲ. ಇದಲ್ಲದೇ ಕಾಲಿನ ಗಾಯ ಮೊವರ್ನಿಂದ ಕಾಲು ಕತ್ತರಿಸಿದಂತೆ ಕಾಣಿಸುತ್ತಿರಲಿಲ್ಲ. ಇದರಿಂದ ಪೊಲೀಸರಲ್ಲಿ ಅನುಮಾನ ಹುಟ್ಟಿಕೊಂಡಿದೆ.
ತನಿಖೆಯ ವೇಳೆ ವ್ಯಕ್ತಿ ಪಾರ್ಶ್ವವಾಯುವಿನಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿ ಟ್ರ್ಯಾಕ್ಟರ್ ಹೇಗೆ ಚಲಾಯಿಸಿದ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಬಂದಿದೆ.
ವಿಮೆ ಹಣ ಪಡೆಯಲು ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಅಡಗಿಸಿಟ್ಟಿದ್ದ. ಬಳಿಕ ಆಕ್ಸಿಡೆಂಟ್ ಆಗಿದೆ ಎಂದು ಸುಳ್ಳು ಕಥೆ ಹೇಳಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ.