ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ 1.33 ಕೋಟಿ ಜಪ್ತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿದೆಡೆ ಚೆಕ್ ಪೋಸ್ಟ್ ಗಳಲ್ಲಿ 1.33 ಕೋಟಿ ನಗದು ಸಹಿತ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, 29,9200 ನಗದು, 19,84,366 ಮೌಲ್ಯದ ಮದ್ಯ, 23,16,950 ಮೌಲ್ಯದ ಮಾದಕ ವಸ್ತುಗಳು, 20,22,500 ಮೌಲ್ಯದ ಬೆಳ್ಳಿ ಆಭರಣ, 40,76,760 ರೂ.ಮೌಲ್ಯದ ಕುಕ್ಕರ್, ಸೀರೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳಾಗಿವೆ. ಲಾ ಅಂಡ್ ಆರ್ಡರ್ ದೃಷ್ಟಿಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ಸೂಕ್ಷ್ಮವಾಗಿದ್ದರೆ, ವೆಚ್ಚದ ವಿಚಾರದಲ್ಲಿ ದೊಡ್ಡಬಳ್ಳಾಪುರ ಸೇರಿ ಉಳಿದ ಮೂರೂ ವಿಧಾನಸಭಾ ಕ್ಷೇತ್ರ ಸೂಕ್ಷ್ಮವಾಗಿವೆ. ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ. ನೆಲಮಂಗಲದಲ್ಲಿ ಅಭ್ಯರ್ಥಿಯೊಬ್ಬರ ಪರ ಹಂಚಿಕೆ ಮಾಡುತ್ತಿದ್ದ ಕುಕ್ಕರ್, ಸೀರೆ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
‘ಶಸ್ತ್ರಾಸ್ತ್ರ ಠೇವಣಿಗೆ ಗಡುವು’
ಜಿಲ್ಲೆಯಲ್ಲಿ ಪರವಾನಗಿ ಪಡೆದ 2000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳಿದ್ದು, 2-3 ದಿನದಲ್ಲಿ ಹಿಂತಿರುಗಿಸುವಂತೆ ಮಾಲೀಕರಿಗೆ ಠಾಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಲ್ಲದೇ ಚುನಾವಣೆ ಸಮಯದಲ್ಲಿ ಅಶಾಂತಿ ಸೃಷ್ಟಿಸಬಹುದಾದ, ಗೂಂಡಾ ಪ್ರವೃತ್ತಿಯಲ್ಲಿ ತೊಡಗಿರುವ 1000 ಕ್ಕೂ ರೌಡಿಶೀಟರ್ ಗಳನ್ನು ಗುರುತಿಸಲಾಗಿದೆ. ಮೂವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ. ಇನ್ನು 9 ಜನರ ಮೇಲೆ ಕಾಯ್ದೆ ಹೇರಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.
ಚುನಾವಣಾ ಭದ್ರತೆಗಾಗಿ ಮೂರು ಬಿಎಸ್ಎಫ್ ತುಕಡಿಗಳು ಬಂದಿಳಿದಿದ್ದು, ಎರಡನೇ ಹಂತದಲ್ಲಿ ಇನ್ನಷ್ಟು ಸಿಬ್ಬಂದಿಯನ್ನು ಹಂಚಿಕೆ ಮಾಡಲಾಗುವುದು. ಕೇಂದ್ರಿಯ ಪಡೆಗಳು ಈಗಾಗಲೇ ಕ್ಷೇತ್ರಗಳಲ್ಲಿ ರೂಟ್ ಮಾರ್ಚ್ ನಡೆಸಿವೆ ಎಂದು ಹೇಳಿದರು.