ಬೆಂಗಳೂರು: ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ (Fake bank account)ತೆರೆದು ಕೋಟ್ಯಂತರ ರುಪಾಯಿ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ದಿಲೀಪ್ ರಾಜೇಗೌಡ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯು ವ್ಯಕ್ತಿಯೊಬ್ಬರ ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಬದಲಾಯಿಸಿ .1.41 ಕೋಟಿಯನ್ನು ನಕಲಿ ಬ್ಯಾಂಕ್ ಖಾತೆ ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಅಧೀಕ್ಷಕ ಎಂ.ಡಿ.ಶರತ್ ಅವರ ನೇತೃತ್ವದಲ್ಲಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಧಾರವಾಡದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಿಇ ಪದವೀಧರನಾದ ದಿಲೀಪ್ ಆರಂಭದಲ್ಲಿ ಖಾಸಗಿ software ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಸರ್ಕಾರಿ ವೆಬ್ಸೈಟ್ಗಳ ಲೋಪಗಳನ್ನು ತಿಳಿದುಕೊಂಡು ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ನ ನ್ಯೂನತೆ ತಿಳಿದುಕೊಂಡು ಆರು ಮಂದಿ ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಸುಮಾರು .3.60 ಕೋಟಿ ಹಣ ವರ್ಗಾಯಿಸಿಕೊಂಡು ವಂಚಿಸಿರುವುದು ತನಿಖೆಯಿಂದ ಬಯಲಾಗಿದೆ.