ಪ್ರಸ್ತುತ ನಡೆಯುತ್ತಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಸ್ವಪ್ನಿಲ್ ಸಿಂಗ್ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಶೂಟಿಂಗ್ 50 ಮೀಟರ್ (3ಪಿ) ರೈಫಲ್ ವಿಭಾಗದಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.
ಅರ್ಹತಾ ಸುತ್ತಿನಲ್ಲಿ 590 ಅಂಕಗಳನ್ನು ಕಲೆ ಹಾಕಿದ್ದ ಅವರು 7ನೇ ಸ್ಥಾನದ ಮೂಲಕ ಫೈನಲ್ ಸುತ್ತಿಗೆ ಪ್ರವೇಶ ಮಾಡಿದ್ದರು. ಅಂದ ಹಾಗೆ ಭಾರತಕ್ಕೆ ಮೂರನೇ ಪದಕ ಇದಾಗಿದೆ. ಇಲ್ಲಿಯವರೆಗೂ ಭಾರತ ಗೆದ್ದಿರುವ ಮೂರೂ ಪದಕಗಳು ಕೂಡ ಶೂಟಿಂಗ್ನಿಂದಲೂ ಬಂದಿರುವುದು ವಿಶೇಷವಾಗಿದೆ.
ಗೂಗಲ್ ಟ್ರೆಂಡ್ನಲ್ಲಿ ಸ್ವಪ್ನಿಲ್ ಕುಸಾಲೆ
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್ 50 ಮೀಟರ್ ರೈಫಲ್ (3ಪಿ) ವಿಭಾಗದಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟರ್ ಸ್ವಪ್ನಿಲ್ ಕುಸಾಲೆ ಗೂಗಲ್ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ (Google Trends) ಆಗಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ಒಡಿಶಾ, ಚಂಡೀಗಢ ಹಾಗೂ ದಿಲ್ಲಿಯಲ್ಲಿ ಇವರ ಬಗ್ಗೆ ಗೂಗಲ್ನಲ್ಲಿ ಸಾಕಷ್ಟು ಮಂದಿ ಹುಡುಕಾಟ ನಡೆಸಿದ್ದಾರೆ. ಒಲಿಂಪಿಕ್ಸ್ ಗೇಮ್ಸ್, ರೈಫಲ್ ಸ್ಪೋರ್ಟ್ಸ್, ಶೂಟಿಂಗ್ ಸ್ಪೋರ್ಟ್ಸ್, ಒಲಿಂಪಿಕ್ಸ್ ಇಂಡಿಯಾ ಹೆಸರಿನಲ್ಲಿಯೂ ಸ್ವಪ್ನಿಲ್ ಕುಸಾಲೆ ಟ್ರೆಂಡ್ ಆಗಿದ್ದಾರೆ.
ಭಾರತಕ್ಕೆ ಐತಿಹಾಸಿಕ ಪದಕ ಗೆದ್ದುಕೊಟ್ಟಿದ್ದಕ್ಕೆ ಸ್ವಪ್ನಿಲ್ ಕುಸಾಲೆಗೆ ಮಹಾರಾಷ್ಟ್ರ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮರಳಿದ ನಂತರ ಅವರಿಗೆ ಬಹುಮಾನ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಸ್ವಪ್ನಿಲ್ ಕುಸಾಲೆ ಅವರ ತಂದೆ ಮತ್ತು ತರಬೇತುದಾರರೊಂದಿಗೆ ಮಾತನಾಡಿದ್ದೇನೆ. ಪದಕ ಗೆದ್ದ ಸ್ವಪ್ನಿಲ್ ಜೊತೆ ವೀಡಿಯೊ ಕರೆ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಹೇಳಿಕೆಯಲ್ಲಿ, ” ಮಹಾರಾಷ್ಟ್ರ ಸರ್ಕಾರವು ಸ್ವಪ್ನಿಲ್ ಕುಸಾಲೆಗೆ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಿಂದ ಭಾರತಕ್ಕೆ ಹಿಂದಿರುಗಿದ ನಂತರ ಅವರಿಗೆ ಪ್ರಶಸ್ತಿಯನ್ನು ನೀಡಲಾಗುವುದು” ಎಂದು ಹೇಳಿದ್ದಾರೆ. ಸ್ವಪ್ನಿಲ್ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಕಂಬಲವಾಡಿ ಗ್ರಾಮದಿಂದ ಬಂದವರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಅಜಿತ್ ಪವಾರ್ ಅವರು ಸ್ವಪ್ನಿಲ್ ಕುಸಾಲೆ ಅವರನ್ನು ಅಭಿನಂದಿಸುತ್ತಾ, ” 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿರುವ ಕೊಲ್ಹಾಪುರದ ನಮ್ಮವರೇ ಆದ ಸ್ವಪ್ನಿಲ್ ಅವರಿಗೆ ಅಭಿನಂದನೆಗಳು. ಅವರ ಪರಿಶ್ರಮ ಮತ್ತು ಕಠಿಣ ಪರಿಶ್ರಮವನ್ನು ನಾನು ಪ್ರಶಂಸಿಸುತ್ತೇನೆ, ಗೌರವಿಸುತ್ತೇನೆ. ನೀವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ಕೊಲ್ಹಾಪುರ ಮತ್ತು ಇಡೀ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.