ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಜೋಶಿ ಮನೆಯಲ್ಲಿ ಕಳ್ಳತನವಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಕೊಚ್ಚಿಯ ಪನಂಪಲ್ಲಿ ನಗರದ 10ನೇ ಅಡ್ಡ ರಸ್ತೆಯ ಬಿ ಸ್ಟ್ರೀಟ್ನಲ್ಲಿರುವ ಜೋಶಿ ಅವರ ಮನೆ ಅಭಿಲಾಷಮ್ ನಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಮೌಲ್ಯದ ಚಿನ್ನಭಾರಣ ಮತ್ತು ವಜ್ರಗಳು ಕಳ್ಳತನವಾಗಿತ್ತು. ಸದ್ಯ ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.
ಮನೆಯ ಹಿಂಬದಿಯ ಅಡುಗೆ ಮನೆ ಒಡೆದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಎರಡನೇ ಮಹಡಿಯ ಕೋಣೆಯನ್ನು ಪ್ರವೇಶಿಸಿ, ಕೊಠಡಿಯಲ್ಲಿದ್ದ ಸೇಫ್ ಲಾಕರ್ ಒಡೆದು 25 ಲಕ್ಷ ಮೌಲ್ಯದ ಹತ್ತು ವಜ್ರದ ಕಿವಿಯೋಲೆಗಳು, ಹತ್ತು ಉಂಗುರಗಳು, ಹತ್ತು ಚಿನ್ನದ ನೆಕ್ಲೇಸ್ ಗಳು, 10 ಬಳೆಗಳು, ಹತ್ತು ವಾಚ್ ಗಳನ್ನು ಕಳ್ಳತನ ಮಾಡಲಾಗಿದೆ. ಈ ವೇಳೆ ಜೋಶಿ ಅವರ ಪತ್ನಿ ಸಿಂಧು, ಸೊಸೆ ವರ್ಷಾ ಹಾಗೂ 3 ಮಕ್ಕಳು ಮನೆಯಲ್ಲಿದ್ದರು.
ಜೋಶಿ ಅವರ ಪತ್ನಿ ಬೆಳಗ್ಗೆ ಅಡುಗೆ ಕೋಣೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಕೆಲಸದಾಕೆ, ಕೊಂತುರುತಿ ಮೂಲದ ಕ್ಲಾನ್ಸಿ, ಕೆಲಸದಾಕೆಯ ಕೋಣೆಯಲ್ಲಿ ಮಲಗಿದ್ದಳು. ಸಿಸಿಟಿವಿ ದೃಶ್ಯಗಳಲ್ಲಿ, ಟೀ ಶರ್ಟ್, ಕ್ಯಾಪ್ ಮತ್ತು ಕಪ್ಪು ಶಾಲು ಧರಿಸಿದ 30 ರ ಹರೆಯದ ವ್ಯಕ್ತಿ ಕಿಟಕಿ ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಪ್ರಕರಣದ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸದ್ಯ ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಿರುವ ಪೊಲೀಸರು ಕೊಚ್ಚಿಗೆ ಕರೆತಂದಿದ್ದಾರೆ. ಕಳ್ಳತನ ಮಾಡಿದ್ದ ಚಿನ್ನಾಭರಣಗಳು ಕಾರಿನಲ್ಲಿ ಪತ್ತೆಯಾಗಿದ್ದು ಕಾರನ್ನು ಸಹ ವಶಕ್ಕೆ ಪಡೆದಿದ್ದಾರೆ.