ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನವರಾತ್ರಿಯ ಮೊದಲ ದಿನದಂದೇ 2023ರ ತೆಲಂಗಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಗೆ ಸಂಬಂಧಿಸಿದ ಚರ್ಚೆ ನಡೆಯುತ್ತಿದೆ. ತೆಲಂಗಾಣ ಚುನಾವಣೆ 2023ರ (Telangana Election 2023) ಕಾಂಗ್ರೆಸ್ ಪ್ರಣಾಳಿಕೆಯನ್ನು (Congress Manifesto) ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
ಆದರೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಿ. ಶ್ರೀಧರ್ ಬಾಬು ಅವರ ಪ್ರಕಾರ, ಪ್ರಣಾಳಿಕೆಯು ವಧು-ವರರಿಗೆ ನಗದು (Cash) ಮತ್ತು ಚಿನ್ನ (Gold) ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ (Free Internet) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮಹಾಲಕ್ಷ್ಮಿ ಯೋಜನೆಯಡಿ ಮದುವೆಯ ಸಮಯದಲ್ಲಿ ಅರ್ಹ ಮಹಿಳೆಯರಿಗೆ 10 ಗ್ರಾಂ ಚಿನ್ನ, ಒಂದು ಲಕ್ಷ ರೂ. ನಗದು ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸೇರಿದಂತೆ ನವೆಂಬರ್ 30ರ ವಿಧಾನಸಭಾ ಚುನಾವಣೆಯ ತೆಲಂಗಾಣ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೆಲವು ಭರವಸೆಗಳು ಒಳಗೊಂಡಿವೆ.
ಪ್ರಸ್ತುತ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರವು, ಕಲ್ಯಾಣ ಲಕ್ಷ್ಮಿ ಮತ್ತು ಶಾದಿ ಮುಬಾರಕ್ ಯೋಜನೆಗಳ ಅಡಿಯಲ್ಲಿ ತೆಲಂಗಾಣದ ನಿವಾಸಿಗಳಾಗಿರುವ ವಧುಗಳಿಗೆ ಮದುವೆಯ ಸಮಯದಲ್ಲಿ 1,00,116 ರೂ.ಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಆದರೆ ಮದುವೆಯ ಸಂದರ್ಭದಲ್ಲಿ ವಧು 18 ವರ್ಷ ಪೂರೈಸಿರಬೇಕು. ಮಾತ್ರವಲ್ಲದೇ ಪೋಷಕರ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಬಾರದು. ಪಕ್ಷದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪ್ರಣಾಳಿಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಅಧಿಕಾರಕ್ಕೆ ಬಂದ ನಂತರ ನಾವು ಇಂಟರ್ನೆಟ್ ಸೇವಾ ಪೂರೈಕೆದಾರರೊಂದಿಗೆ ಮಾತನಾಡುತ್ತೇವೆ ಮತ್ತು ವಿಧಾನಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.
ಬಿಆರ್ಎಸ್ (BRS) ವಕ್ತಾರ ಶ್ರವಣ್ ದಾಸೋಜು ಅವರನ್ನು ಸಂಪರ್ಕಿಸಿದಾಗ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಮ್ಮ ಚುನಾವಣಾ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರು ಚಂದ್ರನ ಕೆಳಗೆ ಏನು ಬೇಕಾದರೂ ಭರವಸೆ ನೀಡುತ್ತಾರೆ. ಕೆಸಿಆರ್ (KCR) ಎಂದು ಕರೆಯಲ್ಪಡುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಬಡವರಿಗಾಗಿ ಸ್ವತಂತ್ರ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಎಂದಿಗೂ ಊಹಿಸದ ನವೀನ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹೊರತರುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕರಾಗಿದ್ದಾರೆ ಎಂದರು.