ಟೆಲ್ ಅವೀವ್: ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒತ್ತೆಯಾಳಾಗಿದ್ದ 10 ತಿಂಗಳ ಮಗು ಸಾವಿಗೀಡಾಗಿದೆ ಎಂದು ಹಮಾಸ್ ಆರೋಪ ಮಾಡಿದೆ. ಕೆಫೀರ್ ಬಿಬಾಸ್ (9 ತಿಂಗಳು) ಮಗುವನ್ನು ಅಕ್ಟೋಬರ್ 7 ರಂದು ಇಸ್ರೇಲ್ನಲ್ಲಿರುವ ಮನೆಯಿಂದ ಸೆರೆ ಹಿಡಿಯಲಾಗಿತ್ತು. ಹಠಾತ್ ದಾಳಿಯ ಸಂದರ್ಭದಲ್ಲಿ ಆತನ ತಾಯಿ ಮತ್ತು ನಾಲ್ಕು ವರ್ಷದ ಸಹೋದರನನ್ನು ಸಹ ಒತ್ತೆಯಾಳಾಗಿ ಇರಿಸಲಾಗಿತ್ತು. ಬುಧವಾರ ಮೂವರೂ ಗಾಜಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಈ ಬಗ್ಗೆ ಇಸ್ರೇಲಿ ಸೇನೆಯು ತನಿಖೆ ನಡೆಸುತ್ತಿದೆ.
ಗಾಜಾ ಪಟ್ಟಿಯಲ್ಲಿರುವ ಎಲ್ಲಾ ಒತ್ತೆಯಾಳುಗಳ ಭದ್ರತೆಗೆ ಹಮಾಸ್ ಸಂಪೂರ್ಣ ಜವಾಬ್ದಾರವಾಗಿದೆ. ಹಮಾಸ್ನ ಕ್ರಮಗಳು ಒತ್ತೆಯಾಳುಗಳಿಗೆ ಅಪಾಯವನ್ನುಂಟುಮಾಡುವುದನ್ನು ಮುಂದುವರೆಸಿದೆ. ಅಪಾಯದಲ್ಲಿ 9 ಮಕ್ಕಳಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಕದನ ವಿರಾಮ ಜಾರಿಗೆ ಬರುವ ಕೆಲವೇ ದಿನಗಳ ಮೊದಲು ಇಸ್ರೇಲಿ ಬಾಂಬ್ ದಾಳಿಯಲ್ಲಿ ಮಗು ಕೆಫೀರ್, ಆತನ ಸಹೋದರ ಏರಿಯಲ್ ಮತ್ತು ಅವರ ತಾಯಿ ಶಿರಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ನಲ್ಲಿ ಹಮಾಸ್ ಸೆರೆಹಿಡಿದಿದ್ದ ಒತ್ತೆಯಾಳುಗಳಲ್ಲಿ ಬಿಬಾಸ್ ಕುಟುಂಬವೂ ಸೇರಿದೆ.