ಚಂಡೀಗಢ: ಕಳ್ಳರನ್ನು (Theif) ಪತ್ತೆಹಚ್ಚುವ ಸಲುವಾಗಿ ಪೊಲಿಸರು ಹಲವಾರು ಬಗೆಯ ಟ್ರಿಕ್ಸ್ಗಳನ್ನು ಬಳಸುವುದು ನೀವು ನೋಡಿರಬಹುದು. ಆದರೆ ಪಂಜಾಬ್ನಲ್ಲಿ (Punjab) 8 ಕೋಟಿ 49 ಲಕ್ಷ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ 10 ರೂ. ಜ್ಯೂಸ್ (Juice) ಸಹಾಯ ಮಾಡಿದೆ. ಜೂನ್ 10ರಂದು ಪಂಜಾಬ್ನ ಲೂಧಿಯಾನದಲ್ಲಿ (Ludhiana) 8 ಕೋಟಿ 49 ಲಕ್ಷ ರೂ. ದರೋಡೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೂಸ್ನ ಸಹಾಯದಿಂದ ಪೊಲೀಸರು ‘ಡಾಕು ಹಸೀನ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಎಂಬಾಕೆ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ನನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್ನಲ್ಲಿ ಬಂಧಿಸಿದ್ದಾರೆ.
ದಂಪತಿಯ ಹೊರತಾಗಿ ಪಂಜಾಬ್ನ ಗಿಡ್ಡರ್ ಬಾಹಾದಿಂದ ಗೌರವ್ ಎಂಬ ಆರೋಪಿಯನ್ನು ಸಹಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಇದುವರೆಗೆ 12 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಆರೋಪಿ ದಂಪತಿ ತಮ್ಮ ಕೆಲಸ ಯಶಸ್ವಿಯಾಗಿ ನಡೆದುದ್ದಕ್ಕಾಗಿ ದೇವರಿಗೆ ಕೈಮುಗಿಯಲು ಸಿಖ್ ದೇಗುಲಕ್ಕೆ ತೆರಳಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಆರೋಪಿ ದಂಪತಿ ಕಳ್ಳತನ ಮಾಡಿದ ಬಳಿಕ ನೇಪಾಳಕ್ಕೆ (Nepal) ಹೋಗಲು ನಿರ್ಧರಿಸಿದ್ದು, ಅದಕ್ಕೂ ಮೊದಲು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಯೋಚಿಸಿದ್ದಾರೆ. ಈ ಮಾಹಿತಿ ಪೊಲೀಸರಿಗೆ ದೊರತಿದ್ದು, ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರಾಖಂಡದ (Uttarakhand) ಸಿಖ್ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದರು. ಅದರಲ್ಲಿ ಆರೋಪಿ ದಂಪತಿಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಹೀಗಾಗಿ ಪೊಲೀಸರು ಭಕ್ತಾದಿಗಳಿಗೆ ಪಾನೀಯ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭ ಎಲ್ಲರಂತೆ ಆರೋಪಿ ದಂಪತಿ ಮುಖ ಮುಚ್ಚಿಕೊಂಡು ಅಲ್ಲಿಗೆ ಬಂದಿದ್ದರು. ಆದರೆ ಪಾನೀಯ ಸೇವಿಸುವ ವೇಳೆ ತಮ್ಮ ಮುಖಕ್ಕೆ ಹಾಕಿಕೊಂಡಿದ್ದ ಬಟ್ಟೆಯನ್ನು ತೆಗೆಯಲೇ ಬೇಕಾಯಿತು. ಈ ಸಂದರ್ಭ ಪೊಲೀಸರು ಅವರನ್ನು ಗುರುತಿಸಿದ್ದಾರೆ.
ಕೂತೂಹಲಕಾರಿ ವಿಷಯವೆಂದರೆ ಗುರುತಿಸಿದ ತಕ್ಷಣ ಪೊಲೀಸರು ಅವರನ್ನು ಬಂಧಿಸದೇ ಅವರಿಗೆ ಸಿಖ್ ದೇಗುಲದಲ್ಲಿ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು. ಬಳಿಕ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳ ಸೆರೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ‘ರಾಣಿ ಜೇನುನೊಣ ಹಿಡಿಯೋಣ’ ಎಂಬ ಹೆಸರನ್ನು ಇಡಲಾಗಿತ್ತು. ಮನ್ದೀಪ್ ಕೌರ್ ದಂಪತಿ ದ್ವಿಚಕ್ರ ವಾಹನದಲ್ಲಿದ್ದ 12 ಲಕ್ಷ ರೂ. ಮತ್ತು ಮನೆಯಲ್ಲಿದ್ದ 9 ಲಕ್ಷ ರೂ ಸೇರಿ ಒಟ್ಟು 21 ಲಕ್ಷ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.