ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 98,083 ಹುದ್ದೆ ಖಾಲಿ ಇದ್ದು, 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಗುಡ್ನ್ಯೂಸ್ ಇಲ್ಲಿದೆ. ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಬರೋಬ್ಬರಿ 98,083 ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ತೇರ್ಗಡೆಯಾದವರೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸದ್ಯ ಅಧಿಕೃತ ಅಧಿಸೂಚನೆ ಇನ್ನೂ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಲಭಿಸಲಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ
ಹುದ್ದೆಗಳ ವಿವರ
ಜಿಡಿಎಸ್ (Gramin Dak Sevak), ಪೋಸ್ಟ್ಮ್ಯಾನ್, ಎಂಟಿಎಸ್, ಪೋಸ್ಟಲ್ ಅಸಿಸ್ಟಂಟ್, ಮೇಲ್ ಗಾರ್ಡ್, ಸೋರ್ಟಿಂಗ್ ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳಿವೆ. ಕರ್ನಾಟಕದಲ್ಲಿ ಒಟ್ಟು 5,731 ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್ – 1,754, ಪೋಸ್ಟ್ಮ್ಯಾನ್ – 3,887 ಮತ್ತು ಮೇಲ್ ಗಾರ್ಡ್ – 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಶುಲ್ಕ ಮತ್ತು ವಯೋಮಿತಿ
ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಮಹಿಳಾ / ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. 18ರಿಂದ 40 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ- 3 ವರ್ಷ, ಎಸ್ಸಿ / ಎಸ್ಟಿ – 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 3 ಗಂಟೆಗಳ ಈ ಪರೀಕ್ಷೆ 100 ಅಂಕಗಳನ್ನು ಒಳಗೊಂಡಿದೆ. ಗಣಿತ, ರೀಸನಿಂಗ್, ಹಿಂದಿ, ಇಂಗ್ಲಿಷ್ ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲಿನ ಹಿಡಿತ ಹೊಂದಿರುವುದು ಕಡ್ಡಾಯ. ಜತೆಗೆ ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ಕಲಿಕೆಯ ಪ್ರಮಾಣ ಪತ್ರ ಹೊಂದಿರಬೇಕು.