ಮುಂಬೈ: ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಸಮಾರಂಭಕ್ಕೆ (Maharashtra Bhushan Award Event) ಬಂದಿದ್ದ 11 ಮಂದಿ ಬಿಸಿಲಿನ ತಾಪಮಾನಕ್ಕೆ ಸಾವನ್ನಪ್ಪಿದ ಘಟನೆ ನಡೆದಿದೆ.
ನವಿ ಮುಂಬೈನಲ್ಲಿ ಸರ್ಕಾರದಿಂದ ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde) ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಜನರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಆಡಿಯೋ ಹಾಗೂ ವೀಡಿಯೋ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಪ್ರೇಕ್ಷಕರಿಗೆ ಯಾವುದೇ ರೀತಿಯ ಆಸನ ವ್ಯವಸ್ಥೆಯಾಗಲಿ ಹಾಗೂ ಶೆಡ್ಗಳ ವ್ಯವಸ್ಥೆಯೂ ಇರಲಿಲ್ಲ. ಇವೆಲ್ಲದರ ಮಧ್ಯೆ ದಿನದ ತಾಪಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಈ ಬಿಸಿಲಿನ ಝಳ ತಾಳಲಾರದೇ ಕಾರ್ಯಕ್ರಮದಲ್ಲಿ ನೆರೆದಿದ್ದ 11 ಮಂದಿ ಸಾವನ್ನಪ್ಪಿದ್ದು, 50 ಮಂದಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಸ್ಪತ್ರೆಗೆ ತೆರಳಿದ್ದು, ರೋಗಿಗಳಿಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಮಾತನಾಡಿ, ಘಟನೆಯು ದುರದೃಷ್ಟಕರವಾಗಿದ್ದು, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.