ಬೆಂಗಳೂರು:- ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸುಮಾರು 12 ಲಕ್ಷ ಮಂದಿ ಮನೆಯಿಂದಲೇ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ.
ಕರ್ನಾಟಕದಲ್ಲಿ 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು ಮತ್ತು 6.13 ಲಕ್ಷ ವಿಕಲಚೇತನರು ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂಬುದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಅರ್ಜಿ ನಮೂನೆ 12ಡಿ ಮೂಲಕ ಅರ್ಹ ಮತದಾರರು ಮನೆಯಿಂದ ಮತ ಚಲಾಯಿಸಲು ಸಹಾಯಕ ಚುನಾವಣಾಧಿಕಾರಿಗೆ ಮನವಿ ಮಾಡಲು ಅವಕಾಶ ನೀಡಲಾಗಿದೆ. ತಾವು ಮತ ಚಲಾಯಿಸಲು ಮತಗಟ್ಟೆಗೆ ಹೋಗುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಈ ಅರ್ಜಿ ಮೂಲಕ ತಿಳಿಸಬಹುದಾಗಿದೆ. ಕರ್ನಾಟಕದಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ (ಮೊದಲ ಹಂತದ ಮತದಾನಕ್ಕೆ ಮಾರ್ಚ್ 28 ರಂದು ಅಧಿಸೂಚನೆ ಹೊರಡಿಸಲಾಗಿದೆ) ಐದು ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜನರು ಚುನಾವಣಾ ಆಯೋಗದ ವೆಬ್ಸೈಟ್ನಿಂದ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ ಆಯಾ ವ್ಯಾಪ್ತಿಯ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.