ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದ ಅಂತಿಮ ಸುತ್ತಿಗೆ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಪೃಥ್ವಿ ನಿರ್ದೇಶನದ ‘ಹದಿನೇಳೆಂಟು’ ಸೇರಿದಂತೆ 14 ಸಿನಿಮಾಗಳು ಆಯ್ಕೆಯಾಗಿವೆ.
ಚಲನಚಿತ್ರೋತ್ಸವದ ವೆಬ್ಸೈಟ್ನಲ್ಲಿ ಏಷಿಯನ್, ಭಾರತೀಯ ಹಾಗೂ ಕನ್ನಡ ಹೀಗೆ ಮೂರು ಸ್ಪರ್ಧಾ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕನ್ನಡ ಸಿನಿಮಾಗಳ ಸ್ಪರ್ಧೆಗೆ 108ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿದ್ದವು. ಈ ಪೈಕಿ ಅಮೋಘವರ್ಷ ಜೆ.ಎಸ್. ನಿರ್ದೇಶನದ, ಪುನೀತ್ ರಾಜ್ ಕುಮಾರ್ ನಟನೆಯ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಜಡೇಶ ಕೆ.ಹಂಪಿ ನಿರ್ದೇಶನದ ‘ಗುರು ಶಿಷ್ಯರು’, ಬೂಸಾನ್ ಅಂತರರಾಷ್ಟ್ರೀಯ ಸಿನಿಮೋತ್ಸವ ಹಾಗೂ ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ವಿಶಾಲ್ ರಾಜ್ ನಿರ್ದೇಶನದ ‘ಕನಕ ಮಾರ್ಗ’, ಶಿವಧ್ವಜ್ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ‘ಕೋರಮ್ಮ’, ರಘು ರಾಮಚರಣ್ ನಿರ್ದೇಶನದ ‘ಕುಬುಸ’, ಪ್ರದೀಪ್ ಕೆ.ಶಾಸ್ತ್ರಿ ಅವರ ‘ಮೇಡ್ ಇನ್ ಬೆಂಗಳೂರು’, ತ್ರಿಪಾಠಿ ಸುಂದರ್ ಅಭಿಕಾರ್ ಅವರ ‘ನಲ್ಕೆ’, ಕೃಷ್ಣೇಗೌಡ ಅವರ ‘ನಾನು ಕುಸುಮ’, ಸುನಿಲ್ ಮೈಸೂರು ನಿರ್ದೇಶನದ ‘ಆರ್ಕೆಸ್ಟ್ರಾ ಮೈಸೂರು’, ಉತ್ಸವ್ ಅವರ ‘ಫೋಟೊ’, ರವೀಂದ್ರ ವೆಂಶಿ ನಿರ್ದೇಶನದ ‘ಮಠ’, ರಿಷಿಕಾ ಶರ್ಮಾ ನಿರ್ದೇಶನದ ‘ವಿಜಯಾನಂದ’ ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಈ ಪೈಕಿ ಮೂರು ಸಿನಿಮಾಗಳು ಪ್ರಶಸ್ತಿ ಪಡೆಯಲಿದ್ದು, ಮಾರ್ಚ್ 30ರಂದು ನಡೆಯಲಿರುವ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಇದು ಘೋಷಣೆಯಾಗಲಿದೆ.
ಏಷಿಯನ್ ಸ್ಪರ್ಧಾ ವಿಭಾಗದಲ್ಲಿ ‘ವಿರಾಟಪುರ ವಿರಾಗಿ‘
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಚಿತ್ರೋತ್ಸವದ ಏಷಿಯನ್ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಸಿನಿಮಾ ಕಥನ ಹಾನಗಲ್ನ ವಿರಕ್ತಮಠದ ಕುಮಾರಸ್ವಾಮಿಗಳ ಜೀವನ ವೃತ್ತಾಂತದ ನಿರೂಪಣೆಯಾಗಿದೆ. ಈ ಸ್ಪರ್ಧಾ ವಿಭಾಗದಲ್ಲಿ ಭಾರತ, ಇರಾನ್, ಜಪಾನ್, ಶ್ರೀಲಂಕಾ, ಬಾಂಗ್ಲಾದೇಶ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕನ್ನಡದ ಎರಡು ಸಿನಿಮಾಗಳು ಆಯ್ಕೆಯಾಗಿರುವುದು ವಿಶೇಷ. ‘ವಿರಾಟಪುರ ವಿರಾಗಿ’ ಜೊತೆಗೆ ಕೆ.ಶಿವರುದ್ರಯ್ಯ ನಿರ್ದೇಶನದ ಕನ್ನಡ ಸಿನಿಮಾ ‘ಸಿಗ್ನಲ್ ಮ್ಯಾನ್ 1971’ ಸಿನಿಮಾ ಈ ವಿಭಾಗದಲ್ಲಿ ಆಯ್ಕೆಯಾಗಿದೆ.
ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಕನ್ನಡದ ಐದು ಸಿನಿಮಾಗಳಿವೆ. ಸಂದೀಪ್ ಶೆಟ್ಟಿ ನಿರ್ದೇಶನದ ‘ಆರಾರಿರಾರೋ’, ಇಸ್ಲಾಹುದ್ದೀನ್ ಎನ್.ಎಸ್. ನಿರ್ದೇಶನದ ‘ಅನ್ನ’, ಚಂಪಾ ಪಿ. ಶೆಟ್ಟಿ ಅವರ ‘ಕೋಳಿ ಎಸ್ರು’, ಕೆ.ಸುಚೇಂದ್ರ ಪ್ರಸಾದ್ ಅವರ ‘ಮಾವು ಬೇವು’, ಹರೀಶ್ ಕುಮಾರ್ ಎಲ್. ಅವರ ನಿರ್ದೇಶನದ ‘ತನುಜಾ’ ಈ ಪಟ್ಟಿಯಲ್ಲಿವೆ.
ಮಾರ್ಚ್ 23ರಂದು ಚಲನಚಿತ್ರೋತ್ಸವ ಆರಂಭವಾಗಲಿದ್ದು, ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಸಂಜೆ 6ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ