ಮುಂಬೈ: 15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ಮೆಂಟ್ ಲಿಮಿಟೆಡ್ನ (Aarka Sports and Management Limited) ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ (Criminal Case) ದಾಖಲಿಸಿದ್ದಾರೆ.
ರಾಂಚಿಯಲ್ಲಿ 2017ರ ಕ್ರಿಕೆಟ್ ಅಕಾಡೆಮಿ ಒಪ್ಪಂದಕ್ಕೆ ಸಂಬಂಧಿಸಿ ಆಗಿರುವ ವಂಚನೆ ವಿರುದ್ಧ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನ ಇಬ್ಬರು ಅಧಿಕಾರಿಗಳ ವಿರುದ್ಧ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿವಾಕರ್ ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಷರತ್ತು? – ಉಲ್ಲಂಘನೆಯಾಗಿದ್ದು ಹೇಗೆ?
ದಿವಾಕರ್ ಅವರು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು 2017ರಲ್ಲಿ ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳನ್ನ ಪಾಲಿಸಲಿಲ್ಲ. ಅಲ್ಲದೇ ಆರ್ಕಾ ಸ್ಪೋರ್ಟ್ಸ್ನ ಶುಲ್ಕ ಮತ್ತು ಷೇರುಗಳನ್ನೂ ಧೋನಿ ಅವರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ
ಒಪ್ಪಂದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘನೆ ಕಾರಣ ಆಗಸ್ಟ್ 15, 2021ರಂದು ಧೋನಿ ಅರ್ಕಾ ಸ್ಪೋರ್ಟ್ಸ್ಗೆ ನೋಟಿಸ್ ಕಳುಹಿಸಿದ್ದರು. ಇಂತಹ ನೋಟಿಸ್ಗಳನ್ನು ಹಲವು ಬಾರಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ವಿಧಿ ಅಸೋಸಿಯೇಟ್ಸ್ನ ದಯಾನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಮೋಸ ಮಾಡಿರುವ ಮತ್ತು 15 ಕೋಟಿ ರೂ. ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ