ಅಹಮದಾಬಾದ್: ಅದಾನಿ ಸಮೂಹದ ಕಂಪನಿಗಳ (Adani Group Companies) 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಅಮೆರಿಕದ GQG ಕಂಪನಿ (GQG Partners) ಖರೀದಿಸಿದೆ.
ಅಮೆರಿಕದ ಹಿಂಡೆನ್ಬರ್ಗ್ ವರದಿಯಿಂದ (Hindenburg Research) ಅದಾನಿ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಇಳಿಕೆಯಾಗಿತ್ತು. ಈ ಮಧ್ಯೆ GQG ಕಂಪನಿ ಹೂಡಿಕೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿದೆ. ಎಸ್ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ ಈ ಷೇರುಗಳನ್ನು ಮಾರಾಟ ಮಾಡಿದೆ.
GQG ಅಧ್ಯಕ್ಷ ಮತ್ತು ಸಿಐಒ ರಾಜೀವ್ ಜೈನ್ (Rajiv Jain) ಪ್ರತಿಕ್ರಿಯಿಸಿ, “ನಾನು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಅದಾನಿ ಕಂಪನಿಗಳು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ದೊಡ್ಡ ಮತ್ತು ಪ್ರಮುಖ ಮೂಲಸೌಕರ್ಯ ಸ್ವತ್ತುಗಳನ್ನು ಹೊಂದಿವೆ ಮತ್ತು ನಿರ್ವಹಿಸುತ್ತವೆ. ಗೌತಮ್ ಅದಾನಿ ಈ ಪೀಳಿಗೆಯ ಅತ್ಯುತ್ತಮ ಉದ್ಯಮಿಯಾಗಿದ್ದಾರೆ. ಭಾರತದ ಆರ್ಥಿಕತೆ ಮತ್ತು ಇಂಧನ ಮೂಲಸೌಕರ್ಯವನ್ನು ಮುನ್ನಡೆಸಲು ಸಹಾಯ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದ್ದಾರೆ.
GQG ವಿಶ್ವದ ಪ್ರಮುಖ ಜಾಗತಿಕ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆದಾರರಲ್ಲಿ ಒಂದಾಗಿದೆ. 2023ರ ಜನವರಿ 31ರಂದು GQG ನೀಡಿದ ಮಾಹಿತಿ ಪ್ರಕಾರ 92 ಶತಕೋಟಿ ಡಾಲರ್ ಮೌಲ್ಯದ ಸ್ವತ್ತುಗಳನ್ನು ನಿರ್ವಹಿಸುತ್ತಿದೆ. ಆಸ್ಟ್ರೇಲಿಯದ ಸ್ಟಾಕ್ ಎಕ್ಸ್ಚೇಂಜ್ ಲಿಸ್ಟೆಡ್ ಕಂಪನಿಯಾಗಿದ್ದು, ಆಸ್ಟ್ರೇಲಿಯಾದ 2022 ಜಾಗತಿಕ ಇಕ್ವಿಟಿ ಮ್ಯಾನೇಜರ್ ಪ್ರಶಸ್ತಿಯನ್ನು ಪಡೆದಿದೆ.
GQG ಅಲ್ಲದೇ ಗೋಲ್ಡ್ಮನ್ ಸ್ಯಾಕ್ಸ್ ಟ್ರಸ್ಟ್ ಅದಾನಿ ಗ್ರೀನ್ ಎನರ್ಜಿ ಕಂಪನಿ 2.5 ಕೋಟಿ ಷೇರುಗಳನ್ನು ಗುರುವಾರ ಖರೀದಿಸಿದೆ. ಎಸ್.ಬಿ. ಅದಾನಿ ಫ್ಯಾಮಿಲಿ ಟ್ರಸ್ಟ್ ಪ್ರತಿ ಷೇರನ್ನು 504.60 ರೂ.ಗೆ ಮಾರಾಟ ಮಾಡಿದೆ.
ಯಾರು ರಾಜೀವ್ ಜೈನ್ ?
ಭಾರತದಲ್ಲಿ ಹುಟ್ಟಿ ಬೆಳೆದ ಜೈನ್ 1990ರಲ್ಲಿ ಮಿಯಾಮಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆಯಲು ಅಮೆರಿಕಗೆ ತೆರಳಿದರು. 1994ರಲ್ಲಿ ಸ್ವಿಜರ್ಲ್ಯಾಂಡ್ ಮೂಲದ ವೊಂಟೊಬೆಲ್ಗೆ ಸೇರಿದ ರಾಜೀವ್ ಜೈನ್ ಸಂಸ್ಥೆಯಲ್ಲಿ ವಿವಿಧ ಹುದ್ದೆ ಏರಿ 2002ರಲ್ಲಿ ಸಿಐಒ ಆಗಿ ನೇಮಕವಾಗಿದ್ದರು. ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಹೂಡಿಕೆ ಅಧಿಕಾರಿ ಮತ್ತು ಇಕ್ವಿಟಿಗಳ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.
23 ವರ್ಷಗಳ ಹೂಡಿಕೆಯ ಅನುಭವವನ್ನು ಹೊಂದಿರುವ ಇವರು 2016ರಲ್ಲಿ ತನ್ನದೇ ಆದ GQG ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತ ಐಟಿಸಿ, ಎಚ್ಡಿಎಫ್ಸಿ, ಆರ್ಐಎಲ್, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳಲ್ಲೂ ಇವರು ಹೂಡಿಕೆ ಮಾಡಿದ್ದಾರೆ.