ನವದೆಹಲಿ: ವಿಮಾನಯಾನ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರಿಗೆ 18 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 65,000 ರೂ. ನಗದನ್ನು ವಂಚಿಸಿ (Cheat) ಪರಾರಿಯಾದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ವಿಜಯಲಕ್ಷ್ಮೀ ವಂಚನೆಗೊಳಗಾದ ಮಹಿಳೆ. ಇವರು ಬೆಂಗಳೂರಿನ (Bengaluru) ಮೂಲದವರಾಗಿದ್ದು, ಮ್ಯಾಟ್ರಿಮೋನಿ (Matrimony) ಸೈಟ್ನಲ್ಲಿ ಪರಿಚಯವಾದ ಅನ್ಶುಲ್ ಎಂಬ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ದೆಹಲಿಗೆ ತೆರಳಿದ್ದರು. ಈ ವೇಳೆ ಅವರ ಬಳಿಯಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ಹಣದ ಸಮೇತ ಅನ್ಶುಲ್ ಪರಾರಿಯಾಗಿದ್ದಾನೆ.
ಅನ್ಶುಲ್ ಜೈನ್ ಮ್ಯಾಟ್ರಿಮೋನಿ ಸೈಟ್ನಲ್ಲಿ ವಿಜಯಲಕ್ಷ್ಮೀ ಎಂಬವರನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ ವಾಟ್ಸಾಪ್ನಲ್ಲಿ ಮಾತನಾಡುತ್ತಾ ತನ್ನನ್ನು ಎನ್ಸಿಆರ್ನಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡು ಅವರನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ. ಮೂರು ದಿನಗಳ ಹಿಂದೆ ಅವರನ್ನು ದೆಹಲಿಗೆ ಬರುವಂತೆ ಒತ್ತಾಯಿಸಿ ಮದುವೆ ಸಮಾರಂಭವೊಂದರಲ್ಲಿ ಅವರನ್ನು ತನ್ನ ಕುಟುಂಬಕ್ಕೆ ಪರಿಚಯಿಸುವುದಾಗಿ ಹೇಳಿದ್ದು, ಅದಕ್ಕೆ ಸೂಕ್ತವಾದ ಒಡವೆಗಳು ಮತ್ತು ಬಟ್ಟೆಯನ್ನು ತರಬೇಕು ಎಂದು ಹೇಳಿದ್ದಾನೆ.
ಮೇ 7ರಂದು ವಿಜಯಲಕ್ಷ್ಮೀ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಫುಡ್ಕೋರ್ಟ್ನಲ್ಲಿ ಒಟ್ಟಿಗೆ ತಿಂಡಿ ತಿಂದು ಪ್ರಯಾಣ ಮುಂದುವರೆಸಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ವೇಳೆ, ಕಾರಿನಲ್ಲಿ ಏನೋ ಸಮಸ್ಯೆಯಿದೆ ಏನೆಂದು ನೋಡು ಎಂದು ಆಕೆಯನ್ನು ಕಾರಿನಿಂದ ಕೆಳಗಿಳಿಸಿದ್ದಾನೆ. ಆಕೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ 18 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳು,
ಮೊಬೈಲ್ ಹಾಗೂ ಆಕೆಯ ಬ್ಯಾಗ್ನಲ್ಲಿದ್ದ 15,000 ರೂ. ಹಣದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಆಕೆಯ ಎಟಿಎಂ ಕಾರ್ಡಿನಿಂದ 50,000 ರೂ.ಗಳನ್ನೂ ಡ್ರಾ ಮಾಡಿದ್ದಾನೆ. ಘಟನೆ ನಡೆದ ಬಳಿಕ ವಿಜಯಲಕ್ಷ್ಮೀ ಆತನ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದು, ಆತನ ಫೋಟೋವನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 420/406 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.