ಕಾಸರಗೋಡು: ಮನೆಯಲ್ಲಿರುವ ಪುಟಾಣಿ ಮಕ್ಕಳನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಸಾಲದು. ನೀರಿನ ಒಳಗೆ, ಮಹಡಿ ಮೇಲಿಂದ ಬಿದ್ದು, ಕರೆಂಟ್ ಶಾಕ್ಗೆ ತುತ್ತಾಗಿ ಸಾವನ್ನಪ್ಪಿರೋ ಎಷ್ಟೋ ಘಟನೆಗಳು ನಡೆದಿವೆ. ಕೇರಳದಲ್ಲಿ ಅಂತಹದೇ ಒಂದು ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ.
ಕಾಸರಗೋಡಿನ 18 ತಿಂಗಳ ಹೆಣ್ಣು ಮಗು ಮನೆಯಲ್ಲಿದ್ದ ಸೊಳ್ಳೆ ನಿವಾರಕ ವಿಷ ಕುಡಿದು ಎರಡು ದಿನಗಳ ಕಾಲ ನರಳಿ, ನರಳಿ ಪ್ರಾಣ ಬಿಟ್ಟಿದೆ. ಮೃತಪಟ್ಟ ಕಂದಮ್ಮನನ್ನು ಜಸಾ ಎಂದು ಗುರುತಿಸಲಾಗಿದೆ. ಈ ಪುಟಾಣಿ ಎರಡು ದಿನದ ಹಿಂದೆ ಮನೆಯಲ್ಲಿ ಸೊಳ್ಳೆಗಳು ಕಚ್ಚಬಾರದು ಎಂದು ಬಳಸುವ ವಿಷವನ್ನು ಕುಡಿದಿತ್ತು.
18 ತಿಂಗಳ ಜಸಾ ಪೋಷಕರು ಕಾಸರಗೋಡಿನ ಕಾಞಂಗಾಡ್ನ ಬಾವನಗರದ ನಿವಾಸಿಗಳು. ಕಳೆದ ಭಾನುವಾರ ಮನೆಯಲ್ಲಿ ಈ ಮಗು ಅಚಾನಕ್ ಆಗಿ ಸೊಳ್ಳೆ ನಿವಾರಕ ವಿಷವನ್ನು ಸೇವಿಸಿದೆ. ಮನೆಯಲ್ಲಿದ್ದವರು ಕೂಡಲೇ ಜಸಾಳನ್ನು ಕಾಞಂಗಾಡ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಿಕಿತ್ಸೆ ಕೊಟ್ಟರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಕೊನೆಗೆ ಕಾಸರಗೋಡಿನಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ 18 ತಿಂಗಳ ಮಗುವಿನ ದೇಹಕ್ಕೆ ವಿಷವೇರಿ ಪ್ರಾಣ ಬಿಟ್ಟಿದೆ.
ವಿಷಕಾರಿ ವಸ್ತುಗಳನ್ನ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಪೋಷಕರು ಎಚ್ಚರ ತಪ್ಪಿದ್ರೆ ಅನಾಹುತಗಳು ಸಂಭವಿಸುತ್ತೆ. ಗೊತ್ತೋ ಗೊತ್ತಿಲ್ಲದೆಯೋ ಸೊಳ್ಳೆ ನಿವಾರಕ ವಿಷ ಈ ಪುಟ್ಟ ಮಗುವಿನ ಮೃತ್ಯುಗೆ ಕಾರಣವಾಗಿದೆ.