ಮರಣದಂಡನೆಗೆ ಗುರಿಯಾಗಿದ್ದ 6 ಮಂದಿ ಸೇರಿ ಕನಿಷ್ಠ 18 ಅಪರಾಧಿಗಳು ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದ ಘಟನೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾವಲಕೋಟ್ ಜೈಲಿನಲ್ಲಿ ಅಪರಾಧಿಯೊಬ್ಬ ಜೈಲು ಕಾವಲುಗಾರನಿಗೆ ಬಂದೂಕು ತೋರಿಸಿ ಜೈಲಿನ ಕೀ ಪಡೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಉಳಿದವರು ಕೂಡ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.
18 ಕೈದಿಗಳ ಪೈಕಿ ಆರು ಮಂದಿ ಮರಣದಂಡನೆಗೆ ಗುರಿಯಾಗಿದ್ದರು. ಮೂವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ತಪ್ಪಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಓರ್ವ ಕೈದಿ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಾರಿಯಾದ ಕೈದಿಗಳಿಗಾಗಿ ಈ ಪ್ರದೇಶದಲ್ಲಿ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜೈಲಿನ ಮುಖ್ಯಾಧಿಕಾರಿ ಮತ್ತು ಇತರ ಕೆಲವು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಅಲ್ಲದೇ ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಭದ್ರತಾ ಲೋಪ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಎಲ್ಲಾ ಜೈಲುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.