ನವದೆಹಲಿ: ಹಿಂದಿನ ಸರ್ಕಾರಗಳ ತುಷ್ಟೀಕರಣ ನೀತಿಯಿಂದಾಗಿ ಭಾರತದಲ್ಲಿ ಪೌರತ್ವ ಬಯಸುತ್ತಿರುವ ಹಿಂದೂ, ಬೌದ್ಧ, ಸಿಖ್, ಜೈನ ನಿರಾಶ್ರಿತರಿಗೆ ನ್ಯಾಯ ಒದಗಿಸಲಿಲ್ಲ ಎಂದು ಇಂಡಿಯಾ ಒಕ್ಕೂಟದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. ಅಮಿತ್ ಶಾ ಅವರು ಗುಜರಾತ್ನ ಅಹಮದಾಬಾದ್ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ವಿತರಿಸಿದರು.
ಸಿಎಎ ಕೇವಲ ಜನರಿಗೆ ಪೌರತ್ವ ನೀಡುವುದಕ್ಕಾಗಿ ಅಲ್ಲ. ಇದು ಲಕ್ಷಾಂತರ ಜನರಿಗೆ ನ್ಯಾಯ ಮತ್ತು ಹಕ್ಕುಗಳನ್ನು ನೀಡುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ತುಷ್ಟೀಕರಣದ ರಾಜಕೀಯದಿಂದಾಗಿ, ದೇಶದಲ್ಲಿ ಆಶ್ರಯ ಪಡೆದ ಜನರಿಗೆ 1947 ರಿಂದ 2014 ರವರೆಗೆ ನ್ಯಾಯ ಸಿಗಲಿಲ್ಲ. ಅವರು ಚಿತ್ರಹಿಂಸೆಗೊಳಗಾದರು. ನೆರೆಯ ದೇಶಗಳಲ್ಲಿ ಅವರು ಹಿಂದೂ, ಬೌದ್ಧ, ಸಿಖ್ ಅಥವಾ ಜೈನರಾಗಿದ್ದರು. ಆದರೆ ಅವರ ದೇಶದಲ್ಲಿಯೂ ಸಹ ಅವರನ್ನು ಹಿಂಸಿಸಲಾಯಿತು. ಇಂಡಿಯಾ ಮೈತ್ರಿಕೂಟದ ತುಷ್ಟೀಕರಣ ರಾಜಕೀಯವು ಅವರಿಗೆ ನ್ಯಾಯವನ್ನು ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಭಜನೆಯಾದಾಗ ಗಲಭೆಗಳು ನಡೆದವು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಕೋಟಿಗಟ್ಟಲೆ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಭಾರವನ್ನು ಹೊರಬೇಕಾಯಿತು. ಈ ದೇಶಗಳ ನಿರಾಶ್ರಿತರಿಗೆ ಭಾರತದಲ್ಲಿ ಪೌರತ್ವ ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ತನ್ನ ವೋಟ್ಬ್ಯಾಂಕ್ ಉದ್ದೇಶದಿಂದ ಪೌರತ್ವ ನೀಡುವ ಕೆಲಸ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.
2019 ರಲ್ಲಿ ಕಾನೂನನ್ನು ಅಂಗೀಕರಿಸಲಾಗಿದ್ದರೂ ಪೌರತ್ವ ನೀಡಲು ವಿಳಂಬವಾಗಿದೆ. ಏಕೆಂದರೆ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸಲಾಗಿದೆ. ಆದರೆ ಸಿಎಎ ಯಾರಿಂದಲೂ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಇಂದು ಕೂಡ ಕೆಲವು ರಾಜ್ಯ ಸರ್ಕಾರಗಳು ಜನರನ್ನು ದಾರಿ ತಪ್ಪಿಸುತ್ತಿವೆ. ನನ್ನ ರಾಜ್ಯದಲ್ಲಿ 128 ಕುಟುಂಬಗಳು ಭಾರತದ ಪ್ರಜೆಗಳಾಗಿ ಮಾರ್ಪಟ್ಟಿವೆ. ಬಾಂಗ್ಲಾದೇಶವನ್ನು ರಚಿಸಿದಾಗ ಅಲ್ಲಿ 27% ಹಿಂದೂಗಳಿದ್ದರು. ಆದರೆ ಇಂದು ಅದು 9% ನಷ್ಟಿದೆ. ಏಕೆಂದರೆ ಅವರು ತಮ್ಮ ಧರ್ಮವನ್ನು ಬದಲಾಯಿಸಲು ಒತ್ತಾಯಿಸಲಾಯಿತು ಎಂದು ತಿಳಿಸಿದ್ದಾರೆ.