ದಮಾಸ್ಕಸ್: ಉತ್ತರ ಸಿರಿಯಾದ ಮ್ಯಾಂಬಿಜ್ ನಗರದಲ್ಲಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳಾ ಕೃಷಿ ಕಾರ್ಮಿಕರು ಎಂದು ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.
ಈ ಪ್ರಾಂತದಲ್ಲಿ ಕುರ್ದಿಶ್ ಪಡೆ ಹಾಗೂ ಟರ್ಕಿ ಬೆಂಬಲಿತ ಗುಂಪಿನ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಬಳಿ ಕಾರು ಬಾಂಬ್ ಸ್ಫೋಟಿಸಿದಾಗ 18 ಮಹಿಳಾ ಕಾರ್ಮಿಕರು ಹಾಗೂ ಓರ್ವ ಪುರುಷ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ 15 ಮಹಿಳೆಯರು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭಿರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿರಿಯಾದ ಈಶಾನ್ಯ ಅಲೆಪ್ಪೋ ಪ್ರಾಂತದ ಮ್ಯಾಂಬಿಜ್ ನಗರದಲ್ಲಿ ಕಳೆದ ಮೂರು ದಿನದಲ್ಲಿ ನಡೆದ ಎರಡನೇ ಕಾರು ಬಾಂಬ್ ದಾಳಿ ಇದಾಗಿದೆ. ಶನಿವಾರ ಮಿಲಿಟರಿ ನೆಲೆಯ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ. ಈ ಘಟನೆ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.