ಇಂಫಾಲ್: ರಾಜಸ್ಥಾನದ ಮೂಲದ 19ರ ಹರೆಯದ ನಂದಿನಿ ಗುಪ್ತಾ (Nandini Gupta) ಅವರು ಈ ಬಾರಿಯ ʻಫೆಮಿನಾ ಮಿಸ್ ಇಂಡಿಯಾ 2023ʼ (Femina Miss India 2023) ಕಿರೀಟ ಧರಿಸಿದ್ದಾರೆ.
ದೆಹಲಿ ಮೂಲದ ಶ್ರೇಯಾ ಪೂಂಜಾ (Shreya Poonja) ಅವರು ಮೊದಲ ರನ್ನರ್ ಅಪ್ ಆಗಿದ್ದರೆ, ಮಣಿಪುರ ಮೂಲದ ತೌನೊಜಮ್ ಸ್ಟ್ರೆಲಾ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ಭಾಜನರಾಗಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮಿಸ್ ಇಂಡಿಯಾ ಆಯೋಜಕರು ಮಾಹಿತಿ ಹಂಚಿಕೊಂಡಿದ್ದು, ‘ಈ ಎಲ್ಲ ಮಹಿಳೆಯರು ತುಂಬಾ ಪವರ್ಫುಲ್ ಆದ ದನಿ ಹೊಂದಿದ್ದಾರೆ. ಅವರು ನಂಬುವ ಎಲ್ಲಾ ವಿಚಾರಗಳನ್ನ ಸಾಕಾರಗೊಳಿಸಲು ಈ ವೇದಿಕೆಯನ್ನು ಅವರು ಬಳಸಿಕೊಂಡಿದ್ದಾರೆ ಅನ್ನೋದು ನಮಗೆ ಖಚಿತವಾಗಿದೆ. ಈ ಸ್ಥಾನಗಳಿಗೆ ಅವರು ಬರಲು ಪಟ್ಟ ಶ್ರಮವನ್ನ ನಾವು ನೋಡಿದ್ದೇವೆ. ಇವರೆಲ್ಲರಿಗೂ ಶುಭಾಶಯಗಳು. ಇದು ಸಂಭ್ರಮವನ್ನು ಸೆಲೆಬ್ರೇಟ್ ಮಾಡುವ ಸಮಯ.. ಎಂದು ಬರೆದುಕೊಂಡಿದೆ.
ಯಾರಿದು ನಂದಿನಿ ಗುಪ್ತಾ?
ನಂದಿನಿ ಮೂಲತಃ ರಾಜಸ್ಥಾನದ ಕೋಟ ನಗರದವರು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಂದಿನಿ, ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಕೂಡ ಪಡೆದುಕೊಂಡಿದ್ದಾರೆ.
ನಂದಿನಿ ಗುಪ್ತಾ ಅವರ ಬದುಕಿಗೆ ಹಿರಿಯ ಉದ್ಯಮಿ ರತನ್ ಟಾಟಾ (Ratan Tata) ಅವರು ಸಾಕಷ್ಟು ಸ್ಫೂರ್ತಿಯಾಗಿದ್ದಾರೆ. ಅವರ ಹಾದಿಯಲ್ಲೇ ಮುಂದೆ ಉದ್ಯೋಗಾವಕಾಶಗಳನ್ನ ಸೃಷ್ಟಿಸುವ ಗುರಿ ಹೊಂದಿದ್ದಾರೆ. ಅವರ ಮಾನವೀಯತೆ ಹಾಗೂ ದಾನ ಮಾಡುವ ಗುಣಗಳನ್ನ ಹೆಚ್ಚು ಇಷ್ಟಪಡುತ್ತಾರೆ.
ಅಲ್ಲದೇ ನಟಿ ಹಾಗೂ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ (Priyanka Chopra) ಅವರ ಸಾಧನೆಗಳು ಹಾಗೂ ಸಮಾಜಕ್ಕೆ ಏನು ಕೊಡಬೇಕೆಂಬ ಬಗ್ಗೆ ಅವರಿಗಿರುವ ಬದ್ಧತೆಗಳಿಂದಲೂ ನಂದಿನಿ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಮಿಸ್ ಇಂಡಿಯಾ ಆಯೋಜಕರು ತಿಳಿಸಿದ್ದಾರೆ.