ಸೂರತ್ (ಗುಜರಾತ್): ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀರ್ಪಿನ ವಿರುದ್ಧ ಸೋಮವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಸೂರತ್ನ ಸೆಷನ್ಸ್ ಕೋರ್ಟ್ನಲ್ಲಿ ರಾಹುಲ್ ಗಾಂಧಿ ಪರ ಅವರ ಕಾನೂನು ತಂಡ ಸೂರತ್ನ ಮೆಟ್ರೋಪಾಲಿಟಿನ್ ಕೋರ್ಟ್ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಮಾನನಷ್ಟ ಪ್ರಕರಣದಲ್ಲಿ ಮೆಟ್ರೋಪಾಲಿಟಿನ್ ಕೋರ್ಟ್ ನೀಡಿರುವ ತೀರ್ಪಿಗೆ ತಡೆ ನೀಡುವಂತೆ ಒಂದು ಅರ್ಜಿ, ಮತ್ತು ಶಿಕ್ಷೆಯನ್ನು ರದ್ದುಗೊಳಿಸುವಂತೆ ಮತ್ತೊಂದು ಅರ್ಜಿಯನ್ನು ರಾಹುಲ್ ಗಾಂಧಿ ಪರ ವಕೀಲರು ಸೂರತ್ನ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಸೆಷನ್ಸ್ ನ್ಯಾಯಾಲಯ ರಾಹುಲ್ ಗಾಂಧಿ ಅವರ ಜಾಮೀನು ಅವಧಿಯನ್ನು ಏಪ್ರಿಲ್ 13ರವರೆಗೂ ವಿಸ್ತರಣೆ ಮಾಡಿದೆ. ಏಪ್ರಿಲ್ 13ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ತೀರ್ಪಿಗೆ ತಡೆ ನೀಡಿದರೆ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯ ಸ್ಥಾನ ಮರಳಿ ಸಿಗಲಿದೆ. ರಾಹುಲ್ ಗಾಂಧಿ ಜೊತೆ ಸೂರತ್ ಸೆಷನ್ಸ್ ಕೋರ್ಟ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಹಿರಿಯ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2019ರಲ್ಲಿ ಮೋದಿ ಸರ್ನೇಮ್ ಹೊಂದಿರುವವರೆಲ್ಲಾ ಕಳ್ಳರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ನ ಮೆಟ್ರೋಪಾಲಿಟಿನ್ ಕೋರ್ಟ್ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲಿಯೇ ರಾಹುಲ್ ಗಾಂಧಿ ವಯನಾಡು ಸಂಸದ ಸ್ಥಾನದಿಂದ ಕೂಡ ಅನರ್ಹರಾಗಿದ್ದರು.