ಇಸ್ಲಾಮಾಬಾದ್: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಭಾನುವಾರ ಎರಡು ಭಾರಿ ಭೂಕಂಪಗಳು ಸಂಭವಿಸಿದ್ದು, ಪರಿಣಾಮ ಖೈಬರ್ ಪಖ್ತುಂಕ್ವಾದ ಬಟ್ಟಗ್ರಾಮ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಹವಾಮಾನ ಇಲಾಖೆ ಪ್ರಕಾರ, ಭಾನುವಾರ ಬೆಳಗ್ಗೆ 10:50 ಕ್ಕೆ ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶದಲ್ಲಿ 6.0 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಬಳಿಕ ಸಂಜೆ 5:57 ಕ್ಕೆ ಅಫ್ಘಾನಿಸ್ತಾನದ ಜಲಾಲಾಬಾದ್ ಬಳಿ 15 ಕಿಮೀ ಆಳದಲ್ಲಿ 4.7 ರ ತೀವ್ರತೆಯ ಭೂಕಂಪ ಸಂಭವಿಸಿತು ಎಂದು ಪಿಡಿಎಂ ತಿಳಿಸಿದೆ.
ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಖೈಬರ್ ಪಖ್ತುಂಖ್ವಾದ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಬಟ್ಟಗ್ರಾಮ್ನ ಬಟ್ಕೋಲ್ನ ಹಾಡೋ ಪ್ರದೇಶದಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಭೂಕಂಪದ ವೇಳೆ ಕುಸಿದು ಬಿದ್ದ ದನದ ಕೊಟ್ಟಿಗೆಯ ಛಾವಣಿಯ ಮೇಲೆ ಮಕ್ಕಳು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.