ಬೆಳಗಾವಿ: ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಿಗ್ಗೆ ಆರಂಭವಾಗಲಿದೆ. ಈ ಮಧ್ಯೆ, ಇನ್ನೂ ಶಾಸಕರಾಗಿ ಆಯ್ಕೆಯಾಗುವ ಮೊದಲೇ ರಾಜೀನಾಮೆ ಮಾತು ಕೇಳಿಬರಲು ಆರಂಭವಾಗಿದೆ. ಬಿಜೆಪಿಗೆ ಪೂರ್ಣ ಬಹುಮತ ದೊರೆಯದಿದ್ದರೆ ಆಪರೇಷನ್ ಕಮಲದ ಸಾಧ್ಯತೆ ಇದೆ. ಆದರೆ ಹಾಗಾಗದು. ರಾಜ್ಯದಲ್ಲಿ 120 ಸ್ಥಾನ ಬಿಜೆಪಿಗೆ ದೊರೆಯಲಿದೆ. ಕಾಂಗ್ರೆಸ್ 85 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಲಿದೆ. ಇದರಿಂದಾಗಿ ಇಪ್ಪತ್ತು ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಬೆಳಗಾವಿಯಲ್ಲಿ ಪಕ್ಷೇತರ ಎಂಎಲ್ಸಿ ಲಖನ್ ಜಾರಕಿಹೊಳಿ (Lakhan Jarkiholi) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಧಿಕಾರ ದೊರೆಯದಿದ್ದರೆ ಅವರು ಎನೂ ಮಾಡುತ್ತಾರೆ. ರಾಜೀನಾಮೆ ಕೊಟ್ಟು ಅಧಿಕಾರ ಇರುವವರ ಜತೆ ಬರುತ್ತಾರೆ. ಗೋವಾದಲ್ಲಿ ಆದ ಹಾಗೆಯೇ ಇಲ್ಲಿಯೂ ಆಗಲಿದೆ. ಯಾರ ನೇತೃತ್ವದಲ್ಲಿ ಇವೆಲ್ಲ ನಡೆಯಲಿದೆ ಗೊತ್ತಿಲ್ಲ ಆದರೆ ಮತ್ತೆ ಇಪ್ಪತ್ತು ಜನ ಬರುತ್ತಾರೆ ಎಂದು ಅವರು ಹೇಳಿದ್ದಾರೆ. ನಾನು ಪಕ್ಷೇತರನಾಗಿಯೇ ಇರುತ್ತೇನೆ ಎಂದೂ ಅವರು ಹೇಳಿದ್ದಾರೆ.
ಇನ್ನು ಲಖನ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ರಾಜೀನಾಮೆ ನೀಡಿ ಹೊದರೂ ಅವರಿಗೆ ಬಹುಮತ ಆಗುವುದಿಲ್ಲವಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಬಹುಮತ ಪಡೆಯಲು ಅಂತರ ಬಹಳ ಇರಲಿದೆ. 35ರಷ್ಟು ಶಾಸಕರು ರಾಜೀನಾಮೆ ಕೂಡಬೇಕಾಗಬಹುದು. ಅಷ್ಟೆಲ್ಲ ಶಾಸಕರನ್ನು ಸೇರಿಸಲು ಅವರಿಂದ ಸಾಧ್ಯವಾಗದು. ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಾರಾ ಎಂಬುದು ಪ್ರಶ್ನೆ. ಸದ್ಯಕ್ಕೆ ಮಾಡಲ್ಲ, ಒಂದು ವರ್ಷ ಶಾಂತವಾಗಿ ಇರುತ್ತಾರೆ, ಕಾದು ನೋಡುತ್ತಾರೆ. ಲೋಕಸಭಾ ಚುನಾವಣೆ ಆಗುವವರೆಗೆ ಶಾಂತವಾಗಿ ಇರುತ್ತಾರೆ. ಈ ಅವಧಿಯಲ್ಲಿ ನಾವು ಗಟ್ಟಿಯಾಗಬೇಕು. ಈ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಒಂದು ತಿರುವು ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.