ಲಕ್ನೋ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ವಧು ಮಂಟಪಕ್ಕೆ ಕರೆತಂದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹೌದು. ಎರಡು ವರ್ಷ ಪ್ರೀತಿಸಿ (Love) ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ವರ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗೆ ವರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆಯೇ ವಧು (Bride) 20 ಕಿ.ಮೀ ಚೇಸ್ ಮಾಡಿ ವರ (Groom) ನನ್ನು ಮಂಟಪಕ್ಕೆ ಕರೆತರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಏನಿದು ಘಟನೆ..?: ಯುವತಿ ಹಾಗೂ ಬದೌನ್ ಜಿಲ್ಲೆಯ ನಿವಾಸಿ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊನೆಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆಯ ನಂತರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅಂತೆಯೇ ಭಾನುವಾರ ಭೂತೇಶ್ವರನಾಥ ದೇವಾಲಯದಲ್ಲಿ ಮದುವೆ ಮಾಡುವುದಾಗಿ ನಿರ್ಧರಿಸಲಾಯಿತು.
ಇತ್ತ ವಧು ಕಡೆಯವರು ಹಾಗೂ ಅತಿಥಿಗಳು ಎಲ್ಲರೂ ಮಂಟಪಕ್ಕೆ ಹಾಜರಾಗಿದ್ದಾರೆ. ವಧು ಕೂಡ ರೆಡಿಯಾಗಿ ಕುಳಿತಿದ್ದಳು. ಆದರೆ ವರ ಮಾತ್ರ ಮಂಟಪಕ್ಕೆ ಬಾರದೇ ಇರುವುದರಿಂದ ಕೆಲವೊಂದು ಅನುಮಾನಗಳು ಹುಟ್ಟಿಕೊಂಡವು. ಬಂದವರೆಲ್ಲ ಗುಸುಗುಸು ಮಾತನಾಡಲು ಆರಂಭಿಸಿದರು. ಈ ವೇಳೆ ವರನಿಗೆ ಕರೆ ಮಾಡಿ ಮಂಟಪಕ್ಕೆ ಬರುವಂತೆ ವಧು ಹೇಳಿದ್ದಾಳೆ. ಈ ವೇಳೆ ವರ, ತನ್ನ ತಾಯಿಯನ್ನು ಕರೆದುಕೊಂಡು ಹೋಗಲು ಬುಡೌನ್ಗೆ ಹೋಗುತ್ತಿದ್ದೇನೆ ಎಂದು ಕ್ಷಮಿಸಿ ಎಂದು ಹೇಳಿದ್ದಾನೆ. ಇದನ್ನು ಕೇಳಿದ ತಕ್ಷಣ ಯುವತಿಗೆ ಮತ್ತಷ್ಟು ಅನುಮಾನ ಬಂದಿದ್ದು,
ವರ ಮದುವೆಯಾಗದೇ ಓಡಿಹೋಗಲು ಮುಂದಾಗಿದ್ದಾನೆ ಎಂಬುದು ಆಕೆಗೆ ಅರಿವಾಯಿತು. ಹೀಗಾಗಿ ಒಂದು ಕ್ಷಣವೂ ವ್ಯರ್ಥ ಮಾಡದೆ, ಬರೇಲಿಯಿಂದ ಸುಮಾರು 20 ಕಿಮೀ ದೂರದ ಭೀಮೋರಾ ಪೊಲೀಸ್ ಠಾಣೆ ಬಳಿ ಬಸ್ ಹತ್ತುವಾಗ ಆತನನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾದಳು. ದಂಪತಿ ದೇವಸ್ಥಾನಕ್ಕೆ ಹಿಂದಿರುಗುವ ಮೊದಲು ಮತ್ತು ಮದುವೆ ವಿಚಾರವಾಗಿ ದಾರಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರ ಮದುವೆ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.