ಎರಡು ಸಾವಿರ ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದ ಸಿನಿಮಾ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳಿನಲ್ಲಿ ಕೆಲ ಸಿನಿಮಾಗಳ ನಿರ್ಮಾಣ ಮಾಡಿದ್ದ ನಿರ್ಮಾಪಕ ಹಾಗೂ ಸಕ್ರಿಯ ರಾಜಕೀಯದಲ್ಲಿಯೂ ತೊಡಗಿಕೊಂಡಿದ್ದ ಜಫರ್ ಸಾದಿಖ್ ನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಜಫರ್ ಸಾದಿಖ್ ಅಂತರಾಷ್ಟ್ರೀಯ ಡ್ರಗ್ ಮಾಫಿಯಾದ ‘ಮಾಸ್ಟರ್ ಮೈಂಡ್’ ಆಗಿದ್ದಾನೆಂದು ಎನ್ಸಿಬಿ ಆರೋಪ ಮಾಡಿದೆ. ಈತನಿಗಾಗಿ ಕಳೆದ ಎರಡು ವಾರಗಳಿಂದಲೂ ಹುಡುಕಾಟ ನಡೆಸಲಾಗಿತ್ತು, ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ಆರಂಭಿಸಲಾಗಿದೆ.
ಬಂಧಿತ ಜಫರ್ ಸಾದಿಖ್ ಡಿಎಂಕೆಯ ಸದಸ್ಯನಾಗಿದ್ದು, ಡ್ರಗ್ಸ್ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದ ಬಳಿಕ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಜಫರ್ ಸಾದಿಖ್, ಸಿನಿಮಾ ನಿರ್ಮಾಪಕ ಸಹ ಆಗಿದ್ದು ಜೆಎಸ್ಎಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತಮಿಳಿನ ‘ಇರೈವನ್ ಮಿಗ ಪೆರಿಯವನ್’, ‘ಮಾಯವಲೈ’, ‘ಮಂಗೈ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾನೆ. ಇದೀಗ ವಸಂತ್ ರವಿ ನಟನೆಯ ಹೊಸ ಸಿನಿಮಾದ ನಿರ್ಮಾಣವನ್ನೂ ಮಾಡಿ ಮುಗಿಸಿದ್ದು ಆ ಸಿನಿಮಾ ಬಿಡುಗಡೆ ಆಗಬೇಕಿದೆಯಷ್ಟೆ. ಅಷ್ಟರಲ್ಲಿಯೇ ಈತ ಡ್ರಗ್ಸ್ ಪ್ರಕರಣದಲ್ಲಿ ತಗಲಾಕಿಕೊಂಡಿದ್ದು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಜಫರ್ ಸಾದಿಖ್, ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಕಿಂಗ್ಪಿನ್ ಎಂದು ಎನ್ಸಿಬಿ ಆರೋಪಿಸಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಇನ್ನೂ ಕೆಲವು ದೇಶಗಳಿಗೆ ಈತ ಡ್ರಗ್ಸ್ ಸಾಗಣೆ, ವಿತರಣೆ ಮಾಡುತ್ತಿದ್ದನಂತೆ. ಭಾರಿ ದೊಡ್ಡ ಡ್ರಗ್ಸ್ ನೆಟ್ವರ್ಕ್ ಹುಟ್ಟುಹಾಕಿದ್ದ ಈ ವ್ಯಕ್ತಿ ಅತ್ಯಂತ ಜಾಣತನದಿಂದ ಡ್ರಗ್ಸ್ ವಿಲೇವಾರಿ ಮಾಡುತ್ತಿದ್ದ ಎನ್ನಲಾಗಿದೆ.