ಬೆಂಗಳೂರು :- ಮುಡಾ ಹಗರಣವ ಇಟ್ಟುಕೊಂಡು ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ ವಿರುದ್ಧ ಮುಗಿ ಬೀಳಲು ಸರ್ಕಾರದ ಕೈಗೆ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಕೋವಿಡ್ ಪರಿಕರಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ.
ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ವಿಧಾನಸಭೆ ಚುನಾವಣೆ ವೇಳೆ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ರಾಜ್ಯದ ಗಮನವನ್ನು ಸೆಳೆದಿತ್ತು. ಅಷ್ಟೇ ಅಲ್ಲ ಅಧಿಕಾರಕ್ಕೆ ಬಂದ ಬಳಿಕ ಕೋವಿಡ್ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿ ಆಯೋಗವನ್ನು ರಚಿಸಿತ್ತು. ಇದೀಗ ತನಿಖಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ಜಸ್ಟೀಸ್ ಜಾನ್ ಮೈಕಲ್ ಡಿ.ಕುನ್ಹಾ, ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸಿದ್ರು.
ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಬಗೆಗಿನ ಮಧ್ಯಂತರ ತನಿಖಾ ವರದಿ ಸರ್ಕಾರದ ಕೈ ಸೇರಿದೆ. ಜಸ್ಟೀಸ್ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ಸುಮಾರು 1722 ಪುಟಗಳ ಮಧ್ಯಂತರ ವರದಿ ಸಲ್ಲಿಕೆ ಮಾಡಲಾಗಿದೆ. ಈ ಮಧ್ಯಂತರ ವರದಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಕೋಟ್ಯಂತರ ರೂ. ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕ್ಷೇತ್ರಾವಾರು ಎಷ್ಟೆಷ್ಟು ಹಣ ಖರ್ಚು ಮಾಡಲಾಗಿದೆ ಎಂದು ತೋರಿಸಿದರೂ ಕೆಲಸವೇ ಆಗಿಲ್ಲ ಎಂದು ಉಲ್ಲೇಖಸಲಾಗಿದೆ. ಹಾಗೂ ಅಕ್ರಮ ಎಸಗಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತನಿಖಾ ತಂಡ ವರದಿಯಲ್ಲಿ ಶಿಫಾರಸು ಮಾಡಿದೆ.
ಕೋವಿಡ್ ಹಗರಣದ ಬಗ್ಗೆ ವರದಿ ಸರ್ಕಾರ ಕೈಸೇರಿದ ಬೆನ್ನಲ್ಲೇ ಬಿಜೆಪಿಗರಲ್ಲಿ ಢವಢವ ಶುರುವಾಗಿದೆ. ಕಳೆದ ರಾತ್ರಿ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವ ಎಂ.ಬಿ ಪಾಟೀಲ್, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಸಮಾಲೋಚನೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಗುರುವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವರದಿ ಬಹಿರಂಗಗೊಳಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಾಜಿ ಸಿಎಂಗಳಾದ ಬಿಎಸ್ವೈ, ಬೊಮ್ಮಾಯಿ ಮತ್ತು ಮಾಜಿ ಆರೋಗ್ಯ ಸಚಿವ ಡಿ.ಸುಧಾಕರ್ಗೆ ಟೆನ್ಷನ್ ಹೆಚ್ಚಾಗಿದೆ.