ನವದೆಹಲಿ: 2016ರಲ್ಲಿ ನೋಟು ಅಪನಗದೀಕರಣದ ಬಳಿಕ 2000 ರು. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಹೊಂದಿದ್ದರು ಎಂದು ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಅಧಿಕಾರಿಗಳ ತಂಡ ಅಪನಗದೀಕರಣದ ಪ್ರಸ್ತಾಪದ ಬಳಿಕ ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರು.ಮುಖಬೆಲೆಯ ನೋಟು ಬಿಡುಗಡೆ ಪ್ರಸ್ತಾಪ ಮುಂದಿಟ್ಟಿರು.
ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರು. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರು. ಮತ್ತು 500 ರು.ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು. ಈ ವೇಳೆ ಆಪ್ತರ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ, ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ.
2 ಸಾವಿರ ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತಿರುವುದು ಅಪನಗದೀಕರಣ ಅಲ್ಲ ಎಂದು 2016ರ ಅಪನಗದೀಕರಣ ವೇಳೆ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2016ರ ನ.8ರಂದು ಅಪನಗದೀಕರಣವಾದಾಗ ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ನೃಪೇಂದ್ರ ಅವರಿಗೆ ಅಪನಗದೀಕರಣ ಯೋಚನೆಯ ಹಿಂದಿನ ಕಾರಣಗಳೂ ಗೊತ್ತು. ಹೀಗಾಗಿ ಅವರ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.
ದೈನಂದಿನ ವಹಿವಾಟುಗಳಿಗೆ 2000 ರು. ಮುಖಬೆಲೆಯ ನೋಟುಗಳು ವ್ಯವಹಾರಿಕ ಕರೆನ್ಸಿ ಅಲ್ಲ ಎಂದು ಪ್ರಧಾನಿ ನಂಬಿಕೆ ಹೊಂದಿದ್ದಾರೆ. ಆದರೆ ಇದು ಕಪ್ಪು ಹಣ ಸೃಷ್ಟಿಗೆ ಹಾಗೂ ತೆರಿಗೆ ವಂಚನೆಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ಕಡಿಮೆ ಮುಖಬೆಲೆಯ ನೋಟುಗಳನ್ನು ಜನಸಮೂಹದ ಹಣ ಎಂದು ಪ್ರಧಾನಿ ಭಾವಿಸಿದ್ದಾರೆ ಎಂದು ಅವರು ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ.