18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಎಲ್ಲಾ ತಂಡಗಳಿಗೂ ರಿಟೇನ್ ಆಟಗಾರರನ್ನು ಬಿಟ್ಟು ಉಳಿದ ಆಟಗಾರರನ್ನು ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್ ಆಟಗಾರರು ಹರಾಜಿನಲ್ಲಿ ಇರುವ ಸಾಧ್ಯತೆಗಳಿವೆ.
ಈ ಬೆನ್ನಲ್ಲೇ ಐಪಿಎಲ್ ಫ್ರಾಂಚೈಸಿಗಳು ವಿಶೇಷ ಬೇಡಿಕೆಯನ್ನಿರಿಸಿವೆ.
ಸದ್ಯ ಮೆಗಾ ಹರಾಜಿಗೂ ಮುನ್ನ ಕನಿಷ್ಠ 3 ರಿಂದ 5 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ 8 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಫ್ರಾಂಚೈಸಿಗಳು ಮನವಿ ಮಾಡಿವೆ. ಅಲ್ಲದೇ ಹರಾಜಿಗೆ 100 ಕೋಟಿ ರೂ.ಗಳಿಗೆ ನಿಗದಿ ಮಾಡಿರುವ ಪರ್ಸ್ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿವೆ. ಆದ್ದರಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್ ಮೊತ್ತವನ್ನು 130 ರಿಂದ 140 ಕೋಟಿ ರೂ.ಗಳವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ ಹೇಳಲಾಗುತ್ತಿದೆ.
ಅಲ್ಲದೇ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM (ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿಗಳು ಡಿಮ್ಯಾಂಡ್ ಮಾಡಿವೆ. 2018ರ ಮೆಗಾ ಹರಾಜಿನಲ್ಲಿ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಲುವು ತೋರಿವೆ ಎಂದು ಹೇಳಲಾಗುತ್ತಿದೆ.
ಆರ್ಟಿಎಂ ಕಾರ್ಡ್ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ.