ಬೆಂಗಳೂರು: ಜಯದೇವ ಆಸ್ಪತ್ರೆಯ ನಿರ್ದೇಶಕರ ಸ್ಥಾನದಿಂದ ಡಾ. ಸಿಎನ್ ಮಂಜುನಾಥ್ ಅವರು ನಿವೃತ್ತಿಯಾದ ಹಿನ್ನೆಲೆ, ಇದೀಗ ನಿರ್ದೇಶಕರ ಹುದ್ದೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ 21 ವೈದ್ಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.
ವೈದ್ಯಕೀಯ ಕಾಲೇಜ್ಗಳಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ, ಬೆಂಗಳೂರು ಮತ್ತು ಮೈಸೂರು ಭಾಗದವರಿಂದ ಅರ್ಜಿ ಸಲ್ಲಿಕೆಯಾಗಿದೆ. ಈ 21 ಅರ್ಜಿಯಲ್ಲಿ 11 ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ಇನ್ನುಳಿದ 10 ಅರ್ಜಿಗಳಿಗೆ ಹುದ್ದೆಗೆ ಬೇಕಾದ ಅರ್ಹತೆ ಇಲ್ಲ ಎಂದು ತಿಳಿದು ಬಂದಿದೆ. ಸರ್ಕಾರ ಮುಂದಿನವಾರ ಜಯದೇವ ಆಸ್ಪತ್ರೆಯ ನಿರ್ದೇಶಕರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ.
ಈಗ ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ. ರವೀಂದ್ರ ಅವರನ್ನು ನೇಮಿಸಲಾಗಿದೆ. ಡಾ. ರವೀಂದ್ರ ಅವರು ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಜಯದೇವ ಆಸ್ಪತ್ರೆ ನಿರ್ದೇಶಕ ಹುದ್ದೆ ಯಾರಿಗೆ ಒಲಿಯಲಿದೆ ಎಂಬುದೇ ಇದೀಗ ಕುತೂಹಲ ಮೂಡಿಸಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ವೈದ್ಯಕೀಯ ಕಾಲೇಜ್ಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರಬೇಕು ಹಾಗೂ ಪ್ರೊಫೆಸರ್ ಆಗಿರಬೇಕು. ಈ ಅರ್ಹತೆ ಇದ್ದವರು ಆಸ್ಪತ್ರೆಯ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು.