ಬೆಂಗಳೂರು: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಹಿನ್ನೆಲೆ ಬೆಂಗಳೂರಿನ ಆರ್ಟಿ ನಗರದಲ್ಲಿ ಚುನಾವಣಾಧಿಕಾರಿಗಳು ಬುಧವಾರ ದಾಳಿ ನಡೆಸಿದರು.
ಈ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 231 ಕುಕ್ಕರ್ಗಳ ಜಪ್ತಿ ಮಾಡಿದ್ದಾರೆ. ಇವುಗಳನ್ನು ಮತದಾರರಿಗೆ ಹಂಚುವುದಕ್ಕಾಗಿ ಖಾಲಿ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಪೈಕಿ ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾವಚಿತ್ರವಿರುವ 60 ಕುಕ್ಕರ್ಗಳನ್ನೂ ಜಪ್ತಿ ಮಾಡಲಾಗಿದೆ.
ಇನ್ನೂ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು, ನಗದು ಹಾಗೂ ಉಡುಗೊರೆಗಳ ಹಂಚಿಕೆ ಜೋರಾಗಿದೆ.
ಈ ಮಧ್ಯೆ, ರಾಜ್ಯದಾದ್ಯಂತ ಕಳೆದ ಒಂದು ವಾರದ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳು, ಪೊಲೀಸರು 69.36 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ನೀತಿನ ಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ನಂತರ ಇಷ್ಟೊಂದು ಮೊತ್ತದ ನಗದು, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ.