ಬೆಂಗಳೂರು: ಕಾಂಗ್ರೆಸ್ ಸರ್ಕಾರದ 24 ಸಚಿವರಿಗೆ ರಾಜ್ಯಪಾಲರು ಶನಿವಾರ ಬೆಳಗ್ಗೆ 11:45ಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಬೋಧಿಸುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಮಾಡಿದ್ದ ಮನವಿಯನ್ನು ಅವರು ಪುರಸ್ಕರಿಸಿದ್ದು, ಸಮಾರಂಭಕ್ಕೆ ರಾಜಭವನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಿಎಂ ಡಿಸಿಎಂ ಸೇರಿದಂತೆ ಒಟ್ಟು 34 ಸಚಿವ ಸ್ಥಾನಗಳ ಪೈಕಿ ಈಗಾಗಲೇ 10 ಸ್ಥಾನಗಳನ್ನ ಭರ್ತಿ ಮಾಡಲಾಗಿದೆ. ಉಳಿದ ಎಲ್ಲ 24 ಸ್ಥಾನಗಳ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆ ಮಾಡಲಾಗಿದೆ.
ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನ ತಲುಪಿದ ಸಚಿವರ ಪಟ್ಟಿಯಲ್ಲಿ ಹೊಸದಾಗಿ ಸಂಪುಟ ಸೇರಲಿರುವ 24 ಭಾವಿ ಸಚಿವರ ಹೆಸರು ಒದಗಿಸಲಾಗಿದೆ. ಸಂಪುಟ ಸೇರುವ ಅವಕಾಶ ವಂಚಿತರಾಗಿರುವ ಹಿರಿಯ ಕಾಂಗ್ರೆಸ್ ನಾಯಕರ ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್, ಟಿಬಿ ಜಯಚಂದ್ರ, ವಿನಯ್ ಕುಲಕರ್ಣಿ ಮತ್ತಿತರು ಬೇಸರಗೊಂಡಿದ್ದಾರೆ. ಇಂದು 24 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ರಾಜಭವನದಲ್ಲಿ ಅದ್ಧೂರಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೆ ಅಗತ್ಯ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.