ಬೆಂಗಳೂರು: ಗ್ರಾಮ ರಾಜ್ಯ ಬಲವರ್ಧನೆ ಮೂಲಕ ರಾಮ ರಾಜ್ಯ ಕಟ್ಟುವ ಕನಸು ಈ ಬಜೆಟ್ ಮೂಲಕ ಅನಾವರಣಗೊಂಡಿದೆ. ಅಭಿವೃದ್ಧಿಯ ತಳಪಾಯ ಎಂದು ಪರಿಗಣಿಸಲ್ಪಡುವ ಕುಡಿಯುವ ನೀರು, ರಸ್ತೆ ಸಂಪರ್ಕ, ಗ್ರಾಮ ಪಂಚಾಯಿತಿ, ಗ್ರಾಮೀಣ ಆರೋಗ್ಯ ಮತ್ತು ಸರಕಾರಿ ಸೇವೆಗಳ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಲಾಗಿದೆ.ಈ ಮೂಲಕ ಅಭಿವೃದ್ಧಿಯ ಪಂಚ ಸೂತ್ರ ಸದ್ದಿಲ್ಲದೆ ಮಂಡನೆಯಾಗಿದೆ.
ಹೌದು ಕರ್ನಾಟಕದ ಗ್ರಾಮೀಣ ಪ್ರದೇಶದ ಸಂಪರ್ಕ ವ್ಯವಸ್ಥೆ ಬಲಪಡಿಸಲು ಮತ್ತು ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪಿಎಂ-ಜನ್ಮಾನ್ ಯೋಜನೆ ಅಡಿಯಲ್ಲಿ 25.1796 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. 23.766 ಕಿಮೀ ವ್ಯಾಪ್ತಿಯ 18 ರಸ್ತೆಗಳು ಮತ್ತು 2 ಸೇತುವೆಗಳ ಕಾಮಗಾರಿಗಾಗಿ ಈ ಅನುದಾನ ಘೋಷಣೆ ಮಾಡಲಾಗಿದೆ.
ಅನುದಾನ ಘೋಷಣೆ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದ್ದು, ಅನುದಾನದಿಂದ ಏನೆಲ್ಲ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮೂಲಕ, ದೂರದ ಹಳ್ಳಿಗಳು ಮತ್ತು ನಗರ ಕೇಂದ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗುವುದು. ಈ ಮೂಲಕ ಬುಡಕಟ್ಟು ಕುಟುಂಬಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುವುದು, ಆರೋಗ್ಯ, ಶಿಕ್ಷಣ ಮತ್ತು ಮಾರುಕಟ್ಟೆಗಳಂತಹ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶ ಈ ಅನುದಾನ ಘೋಷಣೆಯ ಹಿಂದಿದೆ ಎಂದು ಸಚಿವಾಲಯ ಹೇಳಿದೆ.