ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷ ಫೆಬ್ರವರಿಯಲ್ಲಿ ನಿರ್ಮಾಪಕ, ನಟ ಜಾಕಿ ಭಗ್ನಾನಿ ಅವರನ್ನು ಮದುವೆ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕ ಎನಿಸಿಕೊಂಡಿರುವ ಜಾಕಿ ಭಗ್ನಾನಿ ಅವರನ್ನು ಕೈ ಹಿಡಿದ ಬಳಿಕ ರಕುಲ್ ಪ್ರೀತ್ ಸಿಂಗ್ ಜೀವನ ಸೆಟ್ಲ್ ಆಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಸಾಲದ ಸುಳಿಗೆ ಜಾಕಿ ಭಗ್ನಾನಿ ಸಿಲುಕಿಕೊಂಡಿದ್ದು ಇದರಿಂದ ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ.
ಜಾಕಿ ಭಗ್ನಾನಿ ಅವರು ‘ಪೂಜಾ ಎಂಟರ್ಟೇನ್ಮೆಂಟ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆಯಿಂದ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಸಿನಿಮಾಗಳೆಲ್ಲವೂ ಹೀನಾಯವಾಗಿ ಸೋತಿವೆ. ಈ ವರ್ಷ ತೆರೆಕಂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಂಡವಾಳ ಹೂಡಿದ್ದು ಕೂಡ ಇದೇ ಸಂಸ್ಥೆ. ಅಂದಾಜು 350 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಆ ಸಿನಿಮಾ ಫ್ಲಾಪ್ ಆಯಿತು. ಹಾಗಾಗಿ ನಿರ್ಮಾಪಕರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.
ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಜಾಕಿ ಭಗ್ನಾನಿ ಅವರು ಹಲವು ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಅವರ ಒಟ್ಟು ಸಾಲು 250 ಕೋಟಿ ರೂಪಾಯಿ ತಲುಪಿದೆ ಎನ್ನಲಾಗಿದೆ. ಹಾಗಾಗಿ ಅವರು ‘ಪೂಜಾ ಎಂಟರ್ಟೇನ್ಮೆಂಟ್’ ಆಫೀಸ್ ಇದ್ದ ಕಟ್ಟಡವನ್ನು ಮಾರಾಟ ಮಾಡಿದ್ದಾರೆ. 7 ಮಹಡಿಗಳನ್ನು ಹೊಂದಿದ್ದ ಕಟ್ಟಡ ಮಾರಾಟ ಆಗಿದೆ. ಅದನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ. ಆ ಕಟ್ಟಡವನ್ನು ನೆಲಸಮ ಮಾಡಿ, ಅದೇ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ.
‘ಪೂಜಾ ಎಂಟರ್ಟೇನ್ಮೆಂಟ್’ ಸಂಸ್ಥೆಯು ಭಾರಿ ನಷ್ಟ ಅನುಭವಿಸಿದ್ದು, ಶೇಕಡ 80ರಷ್ಟು ಕೆಲಸಗಾರರನ್ನು ಮನೆಗೆ ಕಳಿಸಲಾಗಿದೆ. ಬಹುತೇಕ ಯಾರಿಗೂ ಸಂಬಳ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಈ ಕಂಪನಿ ಬಗ್ಗೆ, ನಿರ್ಮಾಪಕರಾದ ಜಾಕಿ ಭಗ್ನಾನಿ ಹಾಗೂ ವಶು ಭಗ್ನಾನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.