ಕೋಲಾರ: ಕಾಂಗ್ರೆಸ್ (Congress) ಪರಿವಾರದವರು ಜನರ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ. ರೈತರಿಗೆ (Farmers) ಕೊಡಬೇಕಾದ ಶೇ.85 ಹಣವನ್ನ ತಾವೇ ನುಂಗಿ ನೀರುಕುಡಿದಿದ್ದಾರೆ. ಕಾಂಗ್ರೆಸ್ ಸಚಿವರೊಬ್ಬರೇ ಹಿಂದೆ ಹೇಳಿದ್ದರು. ಅಂದ್ರೆ 85 ಪರ್ಸೆಂಟ್ ಕಮಿಷನ್ ತಿನ್ನುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ, ಇದು ಯಾವತ್ತಿಗೂ ಅಭಿವೃದ್ಧಿಮಾಡಲು ಸಾಧ್ಯವಿಲ್ಲ. ಆದ್ರೆ ಬಿಜೆಪಿ ಸರ್ಕಾರ ಡಿಜಿಟಲ್ ಇಂಡಿಯಾ ಮೂಲಕ ಕೇಂದ್ರದಿಂದ ಕಳುಹಿಸಿದ ಹಣ ನೇರವಾಗಿ ಜನರ ಖಾತೆಗೆ ಜಮೆ ಆಗುತ್ತಿದೆ. ಕಳೆದ 9 ವರ್ಷಗಳಲ್ಲಿ 29 ಲಕ್ಷ ಕೋಟಿ ರೂಪಾಯಿಗಳನ್ನ ಜಮೆ ಮಾಡಿದ್ದೇವೆ. ಹಿಂದಿನ ಸರ್ಕಾರ ಆಗಿದ್ರೆ 15 ಪರ್ಸೆಂಟ್ ಹಣ ಅಷ್ಟೇ ತಲುಪುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದರು.
ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಭ್ರಷ್ಟಾಚಾರದ (Corruption) ವಿರುದ್ಧ ಹೋರಾಡಿಲ್ಲ. ಏಕೆಂದರೆ ಮಾಡುವ ಎಲ್ಲಾ ಯೋಜನೆಗಳಲ್ಲೂ ಭ್ರಷ್ಟಾಚಾರ ಇದೆ. 2009ಕ್ಕೂ ಮುನ್ನ ಅವರ ಸರ್ಕಾರ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಆಗಿತ್ತು. ಅಂತಹವರ ಬಳಿಯಿದ್ದ 1 ಲಕ್ಷ ಕೋಟಿ ರೂ. ವಸೂಲಿ ಮಾಡಿದ್ದೇವೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದು, ಅದರಲ್ಲಿ ನೊಂದಿರೋರು ಕಾಂಗ್ರೆಸ್ಸಿನವರೇ. ಅದಕ್ಕಾಗಿ ನನಗೆ ಎಚ್ಚರಿಕೆಗಳನ್ನ ನೀಡುತ್ತಿದ್ದಾರೆ ಎಂದರು.
ಕರ್ನಾಟಕದ ಜನತೆ `ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಅಂತಾ ಜನ ತೀರ್ಮಾನ ಮಾಡಿದ್ದಾರೆ. ಮುಂಬರುವ 25 ವರ್ಷಗಳ ಕರ್ನಾಟಕ ಅಭಿವೃದ್ಧಿಯ ಚಿತ್ರಣದ ಚುನಾವಣೆ ಇದು. ಅಸ್ಥಿರವಾದ ಸರ್ಕಾರ ಬಂದ್ರೆ ಅಭಿವೃದ್ಧಿ ಸಾಧ್ಯವಿಲ್ಲ. ಕರ್ನಾಟಕವನ್ನ ಕಾಂಗ್ರೆಸ್, ಜೆಡಿಎಸ್ನಂತಹ ಭ್ರಷ್ಟಾಚಾರದ ಕಪಿಮುಷ್ಟಿಯಿಂದ ಬಚಾವ್ ಮಾಡಬೇಕಿದೆ. ಹಾಗಾಗಿ ಈ ಬಾರಿ ರಾಜ್ಯದ ಜನತೆ ಡಬಲ್ ಎಂಜಿನ್ ಸರ್ಕಾರಕ್ಕೆ ಬಹುಮತ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದಿಂದ ಅತ್ಯಂತ ಹೆಚ್ಚು ವಂಚನೆಗೆ ಒಳಗಾದವರು ಎಸ್ಸಿ, ಎಸ್ಟಿ, ಒಬಿಸಿ ಸಮಾಜ ಹಾಗೂ ಮಹಿಳಾ ವರ್ಗದವರು. ನಮ್ಮ ಸರ್ಕಾರ ಬಂದ ನಂತರ, ಕೋಟ್ಯಂತರ ಪಕ್ಕಾ ಮನೆಗಳನ್ನ ನೀಡಿದ್ದೇವೆ. 10 ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದೇವೆ. 9 ಕೋಟಿ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ ಸೌಲಭ್ಯ ಕಲ್ಪಿಸಿದ್ದೇವೆ. 2.5 ಕೋಟಿ ಮನೆಗಳಿಗೆ ನೇರ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ತಿಳಿಸಿದರು.
ಭಾರತವನ್ನ ಹೊಳೆಯುವ ನಕ್ಷತ್ರ ಮಾಡ್ತೀವಿ: ರಾಜ್ಯದಲ್ಲಿ ಸ್ಥಿರ ಸರ್ಕಾರ ಬಂದ್ರೆ ಅದರ ಲಾಭ ಏನು ಅನ್ನೋದು ಜನರಿಗೆ ತಿಳಿದಿದೆ. ಕಾಂಗ್ರೆಸ್ ಸರ್ಕಾರ ಕಾಲಘಟ್ಟದಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೀತು ಅಂತಾ ಜನರಿಗೆ ಗೊತ್ತಿದೆ. ಕರ್ನಾಟಕದ ಎರಡು ಪಕ್ಷಗಳು ರಾಜ್ಯಕ್ಕೆ ಕಂಟಕಪ್ರಾಯವಾಗಿದೆ. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಡೀ ಭಾರತದ ಚಿತ್ರಣವನ್ನೇ ಬದಲಾವಣೆ ಮಾಡಿದ್ದನ್ನ ನೀವು ನೋಡಿದ್ದೀರಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಭಾರತವನ್ನ ಹೊಳೆಯುವ ನಕ್ಷತ್ರವಾಗಿ ನೋಡ್ತೀರಿ ಎಂದು ಹೇಳಿದರು.