ಬೆಂಗಳೂರು: ಇದೀಗ ರಾಜ್ಯದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ದಾನ ಪಡೆಯುವವರ ಸಂಖ್ಯೆ ಕೂಡ ಬೆಳೆಯುತ್ತಿದೆ. ಸದ್ಯ ಈಗ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ಅಂಗಾಂಗ ದಾನ ಮಾಡುವಲ್ಲಿ 2ನೇ ಸ್ಥಾನ ಪಡೆದಿದೆ.
2023ರಲ್ಲಿ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದ್ದು ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಿಸಿತ್ತು.
ರಾಜ್ಯದಲ್ಲಿ 178 ಜನ ಅಂಗಾಂಗ ದಾನ ಮಾಡಿದ್ದಾರೆ. ಅಂಗಾಂಗ ದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿರುವ ಜಿಲ್ಲೆಯಾಗಿದೆ.
ಇನ್ನು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಿದವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದೆ. ವ್ಯಕ್ತಿಯ ಸಾವಿನ ನಂತರ ಅಂಗಾಂಗ ದಾನ ಮಾಡಲಾಗುತ್ತೆ. ಒಬ್ಬ ವ್ಯಕ್ತಿ ಕನಿಷ್ಠ ಎಂಟು ಮಂದಿಯ ಜೀವ ಉಳಿಸಬಹುದು. ನೇತ್ರ ದಾನ, ದೇಹ ದಾನಕ್ಕೆ ಬದುಕಿದ್ದಾಗಲೇ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದು
ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ‘ಆಯುಷ್ಮಾನ್ ಭವ’ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಪಡೆಯುವಲ್ಲಿ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಂಗಾಂಗ ದಾನವನ್ನು ಮತ್ತಷ್ಟು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರನ್ನು ಗೌರವಿಸಲು ಆದೇಶ ಹೊರಡಿಸಿದೆ.