ಚಾಮರಾಜನಗರ: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣವಾಗಿದ್ದರಿಂದ ಮನನೊಂದು ವಿದ್ಯಾರ್ಥಿನಿಯೋರ್ವಳು ನಗರದ ಜೆಎಸ್ಎಸ್ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ಮಹೇಶ್ ಎಂಬುವವರ ಪುತ್ರಿ ವಿಜಯಲಕ್ಷ್ಮಿ ಮೃತ ವಿದ್ಯಾರ್ಥಿನಿ. ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್ನಲ್ಲಿ ಶುಕ್ರವಾರ ಘಟನೆ ನಡೆದಿದೆ.
ಪಿಸಿಎಂಸಿಎಸ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ ಪರೀಕ್ಷೆ ಮುಗಿದ ನಂತರ ಸಿಇಟಿ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಹಾಸ್ಟೆಲ್ನಲ್ಲಿದ್ದಳು ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ ಫಲಿತಾಂಶ ನೋಡಿದ್ದಾಳೆ. ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿಯುತ್ತಿದ್ದಂತೆಯೇ ಹಾಸ್ಟೆಲ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಸಾಗಿಸಿ ಮರಣೋ ತ್ತರ ಪರೀಕ್ಷೆ ಬಳಿಕ ವಾರಸು ದಾರರಿಗೆ ಒಪ್ಪಿಸಿದರು. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.