ಟಾಲಿವುಡ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಮೂರನೇ ಮದುವೆಯೂ ಮುರಿದುಬಿತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಪವನ್ ಕಲ್ಯಾಣ್ ಇದೀಗ ಮೂರನೇ ಪತ್ನಿಯಿಂದಲೂ ದೂರವಾದ್ರ ಎಂಬ ಅನುಮಾನ ಶುರುವಾಗಿದೆ.
ಅತಿ ಹೆಚ್ಚು ಫ್ಯಾನ್ ಫಾಲೊಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ಸಿನಿಮಾಗಳ ಜೊತೆಗೆ ರಾಜಕೀಯ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ಸೋಲಲಿ, ಗೆಲ್ಲಲ್ಲಿ ಪವನ್ ಗಿರೋ ಫ್ಯಾನ್ ಫಾಲೋವಿಂಗ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಸಿನಿಮಾಗಳ ಜೊತೆಗೆ ಪವನ್ ಕಲ್ಯಾಣ್ ಹೆಸರು ಸದಾ ವಿವಾದದಲ್ಲಿಯೂ ಕೇಳಿ ಬರುತ್ತಿದೆ.
ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಪವನ್ ಕಲ್ಯಾನ್ ಮೊದಲು ನಂದಿನಿ ಎಂಬುವವರನ್ನು ಮದುವೆಯಾಗಿದ್ದರು. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಟಿ ರೇಣು ದೇಸಾಯಿ ಜೊತೆ ಸಪ್ತಪದಿ ತುಳಿದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಬಳಿಕ ಎರಡೆ ವರ್ಷದಲ್ಲಿ ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು ಪವನ್. ಇಬ್ಬರು ಮಕ್ಕಳೂ ಇದ್ದಾರೆ. ಮೊದಮೊದಲು ಜಂಟಿಯಾಗಿ ಸಮಾರಂಭಗಳಲ್ಲಿ ಕಾಣಿಸುತ್ತಿತ್ತು ಈ ಜೋಡಿ, ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು. ಹೀಗಾಗಿ ಪವನ್ ಅವರ ಮೂರನೇ ಮದುವೆಯೂ ಮುರಿದು ಬಿತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸದ್ಯಕ್ಕೆ ಅನ್ನಾ ಸಿಂಗಪೂರ್ ಅಥವಾ ದುಬೈನಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಾರಂತೆ. ಅಥವಾ ರಷ್ಯಾಕ್ಕೇ ಹೋಗಿರಬಹುದು ಎನ್ನುತ್ತದೆ ಇನ್ನೊಂದು ಮೂಲ. ಈ ವಿಷಯಕ್ಕೆ ಯಾವುದೇ ಆಧಾರ ಇಲ್ಲ. ಯಾವಾಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂತೋ.. ಪವನ್ ಕಲ್ಯಾಣ್ ಆಪ್ತ ಕಮ್ ನಿರ್ಮಾಪಕ ಬಂಡ್ಲಾ ಗಣೇಶ್ ಗರಂ ಆಗಿದ್ದಾರೆ. ಇದೆಲ್ಲ ನಿಜ ಎಂದು ನಿಮಗೆ ಯಾರು ಹೇಳಿದ್ದು? ಎಂದು ಪ್ರಶ್ನಿಸಿ ಗೆಳೆಯನ ಮಾನ ಉಳಿಸಲು ಒದ್ದಾಡುತ್ತಿದ್ದಾರೆ.